ವಿಜಯಪುರ:ಜಿಲ್ಲೆಯಲ್ಲಿ ಮತ್ತೆ ಬೆಳ್ಳಂಬೆಳಗ್ಗೆ ಭಾರಿ ಸದ್ದಿನೊಂದಿಗೆ ಭೂಕಂಪನವಾಗಿದೆ. ಬೆಳಗ್ಗೆ 6.22ರ ಸಮಯದಲ್ಲಿ 3 ರಿಂದ 4 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ. ಇದಕ್ಕೂ ಮುನ್ನ 5-40ರ ವೇಳೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಭೂಕಂಪನವಾಗಿದೆ.
ಕಳೆದ ರಾತ್ರಿಯಿಂದ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಈ ನಡುವೆ ಭೂಕಂಪನವಾಗಿದೆ. ವಿಜಯಪುರದ ನಗರದ ರೇಲ್ವೆ ನಿಲ್ದಾಣ ಪ್ರದೇಶ, ಗೋಳಗುಮ್ಮಟ ಪ್ರದೇಶ, ಗ್ಯಾಂಗಬಾವಡಿ, ಆಶ್ರಮ ಕಾಲೋನಿ, ಫಾರೇಖನಗರ ಸೇರಿದಂತೆ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಶಬ್ದದೊಂದಿಗೆ ಭೂಕಂಪನ ಆಗಿರಲಿಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ತಿಂಗಳಿಂದ ಜಿಲ್ಲೆಯಲ್ಲಿ ಭೂಕಂಪನದ ಅನುಭವ ಆಗುತ್ತಿದ್ದು, ತಜ್ಞರ ತಂಡವೂ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಜಮಖಂಡಿಯಲ್ಲೂ ಭೂಕಂಪನ:ಬಾಗಲಕೋಟೆ ಜಿಲ್ಲೆಯಜಮಖಂಡಿ ತಾಲೂಕಿನ ತುಬುಚಿ ಗ್ರಾಮದಲ್ಲಿಯೂ ಭೂಕಂಪನ ಆಗಿದೆ. 2 ಸೆಕೆಂಡ್ ಕಾಲ ಭೂಮಿ ಕಂಪಿಸಿದ್ದು, ಮನೆಯಲ್ಲಿನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. 'ಶನಿವಾರ ಬೆಳಗಿನ ಜಾವ ಎರಡು ಸೆಕೆಂಡ್ ಭೂಮಿ ಕಂಪಿಸಿದ ಮಾಹಿತಿ ಬಂದಿದೆ. ಕೆಎಸ್ಎನ್ಡಿಎಂಸಿ, ಬೆಂಗಳೂರು ಇವರಿಂದ ಹೆಚ್ಚಿನ ಮಾಹಿತಿ ಪಡೆಯಲಾಗುವುದು' ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಂಪನದಿಂದ ಜಮಖಂಡಿಯ ಕುಂಚನೂರು, ತುಬಚಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನತೆ ಹೆದರಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬೆಳಗಿನ ಜಾವ ಎದ್ದು ಕೆಲಸ ಕಾರ್ಯ ಮಾಡುತ್ತಿದ್ದಾಗ ಮೊದಲು ಸ್ಫೋಟದ ಶಬ್ದ ಕೇಳಿಸಿದ್ದು, ಬಳಿಕ ಭೂಮಿ ಕಂಪಿಸಿದೆ. ಮನೆಯಲ್ಲಿನ ಕೆಲ ಸಾಮಗ್ರಿಗಳು ಕೆಳಗೆ ಬಿದ್ದಿವೆ. ಆದರೆ ಯಾವುದೇ ತೊಂದರೆ ಆಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲೂ ಕಂಪನ:ಪಕ್ಕದ ಮಹಾರಾಷ್ಟ್ರದಲ್ಲೂ ಭೂಮಿ ಕಂಪಿಸಿದೆ. ಮರಬಗಿ, ತಿಕ್ಕುಂಡಿ, ಜಾಲಿಹಾಳ ಮುಚ್ಚಂಡಿ ಭಾಗದಲ್ಲೂ ಸುಮಾರು 10-15 ಸೆಕೆಂಡ್ಗಳ ಕಾಲ ಕಂಪನ ಉಂಟಾಗಿದೆ. ಜತ್ತ ತಾಲೂಕಿನ ಮರಬಗಿ ಗ್ರಾಮದಲ್ಲಿ ಭೂಕಂಪನ ಆದಾಗ ದನಗಳ ಕೊಟ್ಟಿಗೆಯ ಪತ್ರಾಸಗಳು ಅಲುಗಾಡಿದ್ದು, ರಾಸುಗಳು ಬೆದರಿವೆ. ತೋಟದ ಮನೆಯಲ್ಲಿದ್ದ ನಾವು ಹೊರಗೆ ಓಡಿ ಬಂದೆವು ಎಂದು ಮರಬಗಿ ನಿವಾಸಿ ಅಣ್ಣಾರಾಯ ಗದ್ಯಾಳ ಹೇಳಿದ್ದಾರೆ.
ಇದನ್ನೂ ಓದಿ:ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭ