ವಿಜಯಪುರ: ಜಿಲ್ಲೆಯಲ್ಲಿ ಪದೇ ಪದೇ ಭೂಮಿ ಕಂಪಿಸಿದ ಅನುಭವಾಗುತ್ತಿದ್ದು ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಬಸವೇಶ್ವರ ನಗರದಲ್ಲಿ ಭೂಮಿ ಕಂಪಿಸಿತು. ರಿಕ್ಟರ್ ಮಾಪಕದಲ್ಲಿ 2.8 ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
2.3 ಕಿಲೋ ಮೀಟರ್ ಭೂಮಿಯ ಆಳದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ರಾತ್ರಿ ವೇಳೆ ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಂಪನದ ತೀವ್ರತೆ ಕಡಿಮೆ ಇದ್ದು ಗ್ರಾಮಸ್ಥರು ಹೆದರುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಎರಡು ದಿನಗಳ ಹಿಂದೆಯಷ್ಟೇ ಇದೇ ಉಕ್ಕಲಿ ಹಾಗೂ ವಿಜಯಪುರ ನಗರದ ಕೆಲ ಬಡಾವಣೆಯಲ್ಲಿ 3.5 ತೀವ್ರತೆಯ ಕಂಪನ ದಾಖಲಾಗಿತ್ತು.