ಮುದ್ದೇಬಿಹಾಳ (ವಿಜಯಪುರ): ಕೊರೊನಾ ನಡುವೆಯೂ ರಾಜ್ಯದಲ್ಲಿ ಜೂ.25ರಿಂದ ಆರಂಭವಾಗಲಿರುವ ಎಸ್ಎಸ್ಎಲ್ಸಿ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಲ್ಲಿ ಮೂಡಿರುವ ಭಯವನ್ನು ಹೋಗಲಾಡಿಸಿ ನಕಲು ಮುಕ್ತ ಪರೀಕ್ಷೆ ನಡೆಸಲು ಸರ್ವ ಸಿದ್ಧತೆಗಳನ್ನು ಶಿಕ್ಷಣ, ಪೊಲೀಸ್ ಇಲಾಖೆಯಿಂದ ಮಾಡಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಈ.ಶಾಂತವೀರ ಹಾಗೂ ಪ್ರಭಾರಿ ಬಿಇಓ ಆರ್.ಸಿ.ಕಲ್ಬುರ್ಗಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತು ವಿವರಿಸಿದರು.
ಸೂಕ್ಷ್ಮ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಿಗೆ ಡಿವೈಎಸ್‌ಪಿ ಭೇಟಿ, ಪರಿಶೀಲನೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯುಕ್ತರು, ಡಿಡಿಪಿಐ ಅವರು ಕರೆಯುವ ಪ್ರತಿ ಸಭೆಯಲ್ಲೂ ಮುದ್ದೇಬಿಹಾಳ ತಾಲೂಕಿನಲ್ಲಿ ಹಿಂದೆ ಪರೀಕ್ಷೆ ವೇಳೆ ಆಗಿ ಹೋದ ಘಟನೆಯನ್ನು ನೆನಪಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಅತ್ಯಂತ ಎಚ್ಚರಿಕೆಯಿಂದ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ತಯಾರಾಗಿದ್ದಾರೆ ಎಂದರು.
ಆರೋಗ್ಯ ಇಲಾಖೆಯ 13 ಶಿಕ್ಷಣ ಇಲಾಖೆಯಿಂದ ಪೂರೈಕೆಯಾಗಿರುವ 36 ಥರ್ಮಲ್ ಸ್ಕ್ಯಾನರ್‌ಗಳು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಬಳಸಲಾಗುತ್ತಿದೆ.
ಒಂದೊಂದು ಕೇಂದ್ರದಲ್ಲಿ ಎರಡೆರಡು ತಪಾಸಣಾ ಕೌಂಟರ್ ಇರಲಿವೆ. ಒಂದು ಡೆಸ್ಕ್ನಲ್ಲಿ ಒಬ್ಬ ವಿದ್ಯಾರ್ಥಿಯನ್ನು ಹಾಗೂ ಸ್ಥಳಾವಕಾಶವಿದ್ದರೆ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಯಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ತಾಲೂಕಿನ 18 ಪ್ರೌಢಶಾಲೆಗಳ ಒಟ್ಟು 5,502 ವಿದ್ಯಾರ್ಥಿಗಳು 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಲಿದ್ದಾರೆ. ತಾಳಿಕೋಟಿ ಹಾಗೂ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಎರಡು ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್‌ಗಳನ್ನು ಕಾಯ್ದಿರಿಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರತ್ಯೇಕ ಕೊಠಡಿ:ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಕಂಟೇನ್ಮೆಂಟ್ ಝೋನ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ತೆರೆಯಲಾಗುತ್ತಿದ್ದು, ಕೊಠಡಿಯ ಗುರುತು ಯಾವುದೇ ಕಾರಣಕ್ಕೂ ಬಹಿರಂಗಗೊಳಿಸುವುದಿಲ್ಲ. ತಾಲೂಕಿನ 9 ಕಂಟೇನ್ಮೆಂಟ್ ಝೋನ್ಗಳಲ್ಲಿ 52 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ:ತಾಲೂಕಿನ ರಕ್ಕಸಗಿ, ಬ.ಸಾಲವಾಡಗಿ, ಬಳಬಟ್ಟಿ, ಢವಳಗಿ ಹಾಗೂ ವಿಬಿಸಿ ಹೈಸ್ಕೂಲ್ ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದ್ದು, ಕಾಂಪೌಂಡ್ ಇಲ್ಲದ ಶಾಲೆಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ. ಇದಲ್ಲದೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ವಿಬಿಸಿ ಪ್ರೌಢಶಾಲೆಗೆ ಭೇಟಿ ನೀಡಿದ್ದ ವೇಳೆ ಡಿವೈಎಸ್‌ಪಿ, ಪ್ರಭಾರಿ ಬಿಇಓ ಆರ್.ಸಿ.ಕಲ್ಬುರ್ಗಿ ತಿಳಿಸಿದರು.
ಮುದ್ದೇಬಿಹಾಳ, ಬ.ಬಾಗೇವಾಡಿ ತಾಲೂಕಿಗೆ ಎರಡು ಡಿ.ಆರ್ ಸಿಬ್ಬಂದಿಯನ್ನು ಒದಗಿಸುವಂತೆ ಮೇಲಾಧಿಕಾರಿಗಳಲ್ಲಿ ವಿನಂತಿಸಲಾಗಿದೆ. ಮುದ್ದೇಬಿಹಾಳ ತಾಲೂಕಿಗೆ ಒಟ್ಟು 70 ಪೊಲೀಸರು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಪೊಲೀಸರೇ ನಕಲು ಪೂರೈಸುವ ಆಪಾದನೆಗಳಿಗೆ ಗುರಿಯಾದರೆ ಅಂತವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು. ಎಚ್ಚರಿಕೆಯಿಂದ ಪರೀಕ್ಷೆಯ ಕಾರ್ಯ ನಿರ್ವಹಿಸುವಂತೆ ನಮ್ಮ ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ಡಿವೈಎಸ್‌ಪಿ ತಿಳಿಸಿದರು.