ವಿಜಯಪುರ:ಕೇಂದ್ರ ಸರ್ಕಾರ ರಾಜ್ಯದಲ್ಲಿನ ಬರದ ಬಗ್ಗೆ ಗಮನ ಹರಿಸುತ್ತಿಲ್ಲ. ಬರ ನಿರ್ವಹಣೆ ಚರ್ಚೆಗೆ ಮುಖ್ಯಮಂತ್ರಿಗಳಿಗೆ ಸಮಯಾವಕಾಶ ಕೂಡ ನೀಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹೇಳಿದರು. ನಾಗಠಾಣ ಹಾಗೂ ಇಂಡಿ ತಾಲೂಕುಗಳಲ್ಲಿ ಬರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವರು ನಮಗೆ ಸಿಗುತ್ತಿಲ್ಲ. ಭೇಟಿಗೆ ಸಮಯ ಸಹ ನೀಡುತ್ತಿಲ್ಲ. ಅವರಲ್ಲಿ ಸಮಯ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಯಾವುದೋ ಒಂದು ಪಕ್ಷದ ಆಸ್ತಿ ಅಲ್ಲ, ಅವರು ಮತ ಹಾಕಿರಬಹುದಷ್ಟೇ. ರಾಜಕೀಯ ಬದಿಗಿಟ್ಟು ಎಲ್ಲರೂ ರೈತರ ನೆರವಿಗೆ ಬರಬೇಕಿದೆ ಎಂದು ಒತ್ತಾಯಿಸಿದರು.
ಕೇಂದ್ರದ ಮೇಲೆ ಒತ್ತಡ ಹಾಕುವ ಮೂಲಕ ನಾವು ನಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಿಲ್ಲ. ಸಂಸದರು ಕೇಂದ್ರ ಸರ್ಕಾರದ ಮನವೊಲಿಸಿ ಸಹಾಯಕ್ಕೆ ಬರಬೇಕಿದೆ. ಇದು ಅವರು ಮಾಡಬೇಕಿರುವ ಮೊದಲ ಕೆಲಸ. ಅದಕ್ಕಾಗಿಯೇ ಸಂಸದರನ್ನು ರಾಜ್ಯದ ಜನರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಈಗಾಗಲೇ ಬರ ಅಧ್ಯಯನಕ್ಕೆ ಬಂದಿದ್ದ ತಂಡ ಕೇಂದ್ರಕ್ಕೆ ವರದಿ ಒಪ್ಪಿಸಿದೆ. ಈ ವರೆಗೆ ಪರಿಹಾರ ಬಂದಿಲ್ಲ. ಕೇಂದ್ರ ನಿಯಮಾವಳಿಯಂತೆ ಪರಿಹಾರ ನೀಡಬೇಕಿದೆ.
ರಾಜ್ಯ ಸರ್ಕಾರವು ತಮ್ಮ ಇತಿಮಿತಿಯಲ್ಲಿ ಸಹಾಯ ಮಾಡೇ ಮಾಡುತ್ತದೆ. ನಷ್ಟವಾದ ಪ್ರಮಾಣದ ಅರ್ಧವನ್ನಾದರೂ ಕೇಂದ್ರ ಸರ್ಕಾರ ನೀಡಬೇಕು. ಏಕರೆಗೆ 12 ಸಾವಿರವಾದರೂ ಕೊಡಲಿ, 24 ಸಾವಿರ ಕೇಳಿದರೆ ಅದು ರಾಜಕೀಯವಾಗುತ್ತೆ. ಈ ನಿಟ್ಟಿನಲ್ಲಿ ರಾಜ್ಯದ 26 ಸಂಸದರು ಬರದ ಬಗ್ಗೆ ಕೇಂದ್ರ ಹಾಗೂ ಪ್ರಧಾನಿಗಳ ಗಮನ ಸೆಳೆಯುತ್ತಿಲ್ಲ ಎಂದು ಸಚಿವರು ಆಕ್ರೋಶ ಹೊರಹಾಕಿದರು. ಎನ್ಡಿಆರ್ಎಫ್ನ ನಿಯಮಾವಳಿಯಲ್ಲಿ ಬದಲಾಗಬೇಕು. ಜನಪ್ರತಿನಿಧಿಗಳಾದ ನಾವು ಸಹ ಒತ್ತಾಯ ಮಾಡುತ್ತಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದರು.