ಮುದ್ದೇಬಿಹಾಳ: ರೈತ ಅನುವುಗಾರರನ್ನು ಕೃಷಿ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಕೃಷಿ ಇಲಾಖೆಯ ರೈತ ಅನುವುಗಾರರ ಸಂಘದ ಪದಾಧಿಕಾರಿಗಳು ತಹಶಿಲ್ದಾರ್ರ ಪರವಾಗಿ ಶಿರಸ್ತೇದಾರ ಎ.ಬಿ. ಹಿರೇಮಠರಿಗೆ ಮನವಿ ಪತ್ರ ಸಲ್ಲಿಸಿದರು.
ಡಿಪ್ಲೋಮಾ ವಿದ್ಯಾರ್ಥಿಗಳನ್ನು ರೈತ ಮಿತ್ರರಾಗಿ ನೇಮಿಸದಂತೆ ಆಗ್ರಹ - ರೈತ ಅನುವುಗಾರರ ಸಂಘದ ತಾಲೂಕಾಧ್ಯಕ್ಷ ಅಯ್ಯನಗೌಡ ಪಾಟೀಲ
ರೈತ ಮಿತ್ರ ನೇಮಕಾತಿಗೆ ಎರಡು ವರ್ಷ ಡಿಪ್ಲೋಮಾ ಕಲಿತ ವಿದ್ಯಾರ್ಥಿಗಳನ್ನು ಕೈಬಿಟ್ಟು ಈಗಾಗಲೇ ಇಲಾಖೆಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸಿರುವ ಅನುವುಗಾರರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
![ಡಿಪ್ಲೋಮಾ ವಿದ್ಯಾರ್ಥಿಗಳನ್ನು ರೈತ ಮಿತ್ರರಾಗಿ ನೇಮಿಸದಂತೆ ಆಗ್ರಹ Drop Diploma Students For Farmer Ally Recruitment said by Farmer Supporters Association](https://etvbharatimages.akamaized.net/etvbharat/prod-images/768-512-7541726-207-7541726-1591700444218.jpg)
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ವೈ.ಚಲವಾದಿ, ಕೃಷಿ ಇಲಾಖೆಯಲ್ಲಿ 12 ವರ್ಷಗಳಿಂದ ಭೂಚೇತನ ಯೋಜನೆಯಡಿ ಮಣ್ಣು ಪರೀಕ್ಷೆ, ಬೆಳೆ ಕಟಾವು ಸಮೀಕ್ಷೆ,ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಸೇರಿದಂತೆ ಇಲಾಖೆ ಹಾಗೂ ರೈತರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದೆವು. ಆದರೆ ಸರ್ಕಾರ ಈಗ ಕೃಷಿ ಇಲಾಖೆಯಲ್ಲಿ ಹೊಸದಾಗಿ ರೈತ ಮಿತ್ರ ನೇಮಕಾತಿಗೆಂದು ಡಿಪ್ಲೋಮಾ ವಿದ್ಯಾರ್ಥಿಗಳನ್ನು ನೇಮಿಸುವುದಾಗಿ ಚಿಂತನೆ ನಡೆಸಿದ್ದು, ಇದು ಅನುವುಗಾರರನ್ನು ಬೀದಿಗೆ ತರುವ ಹುನ್ನಾರವಾಗಿದೆ ಎಂದು ದೂರಿದರು.
ತಾಲೂಕಾಧ್ಯಕ್ಷ ಅಯ್ಯನಗೌಡ ಪಾಟೀಲ ಮಾತನಾಡಿ, ರೈತಮಿತ್ರ ನೇಮಕಾತಿಗೆ ಎರಡು ವರ್ಷ ಡಿಪ್ಲೋಮಾ ಕಲಿತ ವಿದ್ಯಾರ್ಥಿಗಳನ್ನು ಕೈಬಿಟ್ಟು ಈಗಾಗಲೇ ಇಲಾಖೆಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸಿರುವ ಅನುವುಗಾರರನ್ನು ನೇಮಕಾತಿ ಮಾಡಿಕೊಳ್ಳಬೇಕು. ನಮ್ಮ ಕುಟುಂಬಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.