ಮುದ್ದೇಬಿಹಾಳ: ತಾಲೂಕಿನ ಯರಝರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ದೊಡ್ಡ ಗ್ರಾಮವಾಗಿರುವ, ಮೂಲ ಸೌಕರ್ಯಗಳನ್ನು ಒಳಗೊಂಡಿರುವ ಕಾಳಗಿ ಗ್ರಾಮದಲ್ಲಿ ಮುಂಬರುವ ದಿನಗಳಲ್ಲಿ ಮೊದಲ ಆದ್ಯತೆ ಮೇರೆಗೆ ಪ್ರೌಢ ಶಾಲೆ ಮಂಜೂರಾತಿಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಆರಂಭಿಸಲಾಗುವುದು ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ್ ನಡಹಳ್ಳಿ ಹೇಳಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ - ಮುದ್ದೇಬಿಹಾಳ ಸುದ್ದಿ
ಕಾಳಗಿ ಗ್ರಾಮದಲ್ಲಿ 4.38 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಮಾಜ ಸೇವಕ ಶಾಂತಗೌಡ ಪಾಟೀಲ್ ನಡಹಳ್ಳಿ ಚಾಲನೆ ನೀಡಿದರು.
![ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ](https://etvbharatimages.akamaized.net/etvbharat/prod-images/768-512-8706408-991-8706408-1599447889009.jpg)
ತಾಲೂಕಿನ ಕಾಳಗಿ ಗ್ರಾಮದಲ್ಲಿ 4.38 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಹಲವಾರು ವರ್ಷಗಳಿಂದ ಕಾಳಗಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಿಂದಿನವರು ವಿಫಲರಾಗಿದ್ದಾರೆ. ಆದರೆ ಬಿಜೆಪಿ ಸರ್ಕಾರದಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲೂ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಮುಂದಾಗಿದ್ದೇವೆ. ತಮ್ಮ ಸಹೋದರರು, ಶಾಸಕರಾಗಿರುವ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದು ಕೊಡಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮಸ್ಥರ ಬೇಡಿಕೆಯಂತೆ ಈಗಾಗಲೇ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಖಂಡಿತವಾಗಿಯೂ ಸರ್ಕಾರದ ಮೇಲೆ ಒತ್ತಡ ಹೇರಿ ಈ ಭಾಗದಲ್ಲಿ ಸುಸಜ್ಜಿತ ಪ್ರೌಢ ಶಾಲೆ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಇದೇ ವೇಳೆ ಗ್ರಾಮಸ್ಥರು ರಸ್ತೆ, ದೇವಸ್ಥಾನ, ಶಾಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.