ವಿಜಯಪುರ:ಗಾಂಧೀಜಿ ಒಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಸುಭಾಶ್ಚಂದ್ರ ಬೋಸ್ ಅವರಾದಿಯಾಗಿ ಅನೇಕರು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಗಾಂಧೀಜಿ ಒಬ್ಬರಿಂದ ಸ್ವಾತಂತ್ರ್ಯ ಸಿಕ್ಕಿಲ್ಲ, ಸಿದ್ದರಾಮಯ್ಯ ಸಾವರ್ಕರ್ಗೆ ಅವಮಾನ ಮಾಡಬಾರದು: ಯತ್ನಾಳ್ - ಸಿದ್ದರಾಮಯ್ಯ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ
ಶಿವಾಜಿ ಮಹಾರಾಜರು ಸೇರಿದಂತೆ ಇತರ ಮಹಾನ್ ವ್ಯಕ್ತಿಗಳ ಇತಿಹಾಸ ಮುಚ್ಚಿಟ್ಟು ಕೇವಲ ನೆಹರೂ ಮನೆತನದವರನ್ನು ವೈಭವೀಕರಣ ಮಾಡಲಾಗಿದೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಮಹಾತ್ಮಾ ಗಾಂಧೀಜಿ ಬಗ್ಗೆ ಗೌರವವಿದೆ. ನೇತಾಜಿ ಸುಭಾಶ್ಚಂದ್ರ ಭೋಸ್ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ, ಗಾಂಧೀಜಿ ಮೊಂಡುತನ ಹಾಗೂ ನೆಹರೂ ಮೇಲಿನ ಪ್ರೀತಿಯಿಂದ ಸುಭಾಶ್ಚಂದ್ರ ಭೋಸ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿದರು ಎಂದಿದ್ದಾರೆ. ಕಮ್ಯುನಿಸ್ಟರು ಇತಿಹಾಸ ತಿರುಚಿದ್ದು, ಅಕ್ಬರ್ ನಂತರದ ಇತಿಹಾಸ ಹೇಳಲಾಗಿದ್ದು, ಕಾಂಗ್ರೆಸ್ನ ಕೆಟ್ಟ ಸಂಸ್ಕೃತಿ ದೇಶವನ್ನು ಹಾಳು ಮಾಡಿದೆ ಎಂದರು.
ಸಾವರ್ಕರ್ ಕುರಿತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಸಾವರ್ಕರ್ ರಾಷ್ಟ್ರ ಕಂಡ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್ಗೆ ಭಾರತ ರತ್ನ ಪ್ರದಾನ ಮಾಡಬೇಕು ಎಂದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು. ಗಾಂಧೀಜಿ ಕೊಲೆಯಲ್ಲಿ ಸಾವರ್ಕರ್ ಪಾತ್ರವಿತ್ತು ಅಂತೀರಲ್ಲಾ ನೀವು ಅದನ್ನು ನೋಡಿದ್ದೀರಾ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರಿಗೆ ಅವಮಾನ ಮಾಡಬಾರದು ಎಂದು ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ಕಿಡಿಕಾರಿದರು.