ಮುದ್ದೇಬಿಹಾಳ: ತಾಲೂಕಿನ ತಾಳಿಕೋಟೆ ಪಟ್ಟಣಕ್ಕೆ ಹೊಂದಿಕೊಂಡು ಹರಿಯುತ್ತಿರುವ ಡೋಣಿ ನದಿ ಪ್ರವಾಹ 5ನೇ ದಿನವೂ ಯಥಾವತ್ತಾಗಿದ್ದು ಹಡಗಿನಾಳ ಗ್ರಾಮದ ಮೂಲಕ ಸಂಪರ್ಕ ಕಲ್ಪಿಸುವ ಕೆಳಮಟ್ಟದ ಸೇತುವೆ ಜಲಾವೃತಗೊಂಡಿದೆ.
ಕುಂಟುತ್ತಾ ಸಾಗಿದ ಡೋಣಿ ಸೇತುವೆ ಕಾಮಗಾರಿ; ಅಂಗೈಯಲ್ಲಿ ಜೀವ ಹಿಡಿದು ನದಿ ದಾಟುವ ಸ್ಥಿತಿ ಇದರಿಂದ ಹಡಗಿನಾಳ, ಹರನಾಳ,ಕಲ್ಲದೇವನಹಳ್ಳಿ ಗ್ರಾಮಸ್ಥರು ಮತ್ತು ಪಿಯುಸಿ ಪರೀಕ್ಷಾರ್ಥಿಗಳು 4 ಕಿ.ಮೀ ಅಂತರದ ಮಿಣಜಗಿ ಗ್ರಾಮದ ಮೂಲಕ ಸುತ್ತುವರೆದು ಪಟ್ಟಣದಲ್ಲಿಯ ಕೆಲಸ ಕಾರ್ಯಗಳಿಗೆ ಸೇರುತ್ತಿದ್ದರು. ಆದರೆ ಆ ಭಾಗದಲ್ಲಿ ಸೋಗಲಿಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಬಿಟ್ಟಿದ್ದರಿಂದ ಆ ಸೇತುವೆಯೂ ಕೂಡಾ ಜಲಾವೃತಗೊಂಡಿದೆ.
ಆದರೆ, ಕುಂಟುತ್ತಾ ಸಾಗಿರುವ ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಇಚ್ಛಾಶಕ್ತಿಯನ್ನು ಗುತ್ತಿಗೆದಾರರ ಕಡೆಯವರು ಮಾಡುತ್ತಿಲ್ಲ. ಕೆಆರ್‌ಡಿಸಿಎಲ್‌ನಿಂದ ಈ ಕಾಲುವೆ ಕಾಮಗಾರಿ ಮಾಡುತ್ತಿದ್ದು ಈವರೆಗೂ ಕಂಬಗಳ ಕಾಮಗಾರಿ ಆಗಿದ್ದು ಬಿಟ್ಟರೆ ಬೇರೆನೂ ಪ್ರಗತಿಯಾಗಿಲ್ಲ. ಪ್ರತಿ ವರ್ಷ ಮಳೆಯಾದಾಗ ಇದೇ ಪರಿಸ್ಥಿತಿ ಎಂದು ಕರವೇ ಸಂಘಟನೆ ತಾಲೂಕ್ ಉಪಾಧ್ಯಕ್ಷ ಜೈಭೀಮ ಮುತ್ತಗಿ ಹೇಳಿದರು.
ಹಳ್ಳದ ನೀರು ಬಹಳಷ್ಟು ಸೆಳೆತ ಕಾಣಿಸಿಕೊಂಡಿರುವುದರಿಂದ ಜನರು ಡೋಣಿ ನದಿಯ ಪ್ರವಾಹದಲ್ಲಿಯೇ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ದಡ ಸೇರುತ್ತಿದ್ದಾರೆ. ನದಿಯ ಆಚೆಗೆ ಇರುವ ಜಮೀನಿನ ರೈತರು ಕಸ ಕೀಳುವ ಕೆಲಸಕ್ಕೆ ಟ್ರ್ಯಾಕ್ಟರ್ ಇನ್ನಿತರ ವಾಹನಗಳಲ್ಲಿ ಆತಂಕದ ನಡುವೆಯೇ ಸಂಚರಿಸಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಮರಳಿ ಬಂದಿದ್ದು ಕಂಡುಬಂತು.
ಬೈಕ್ ಸವಾರನೋರ್ವ ಮದ್ಯದ ಅಮಲಿನಲ್ಲಿ ಸೇತುವೆ ದಾಟಲು ಪ್ರಯತ್ನಿಸುತ್ತಿರುವಾಗಲೇ ನದಿದಡದಲ್ಲಿಯೇ ಬೈಕ್ ಸಮೇತವಾಗಿ ಬಿದ್ದು ಮರಳಿ ಬೈಕಿನೊಂದಿಗೆ ವಾಪಸ್ ಬರುವಂತಾಯಿತು.ಕೆಲಕಾಲ ಈ ದೃಶ್ಯ ದಡದಲ್ಲಿರುವ ಜನರಲ್ಲಿ ಆತಂಕ ಮೂಡಿಸಿತ್ತು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಸ್ವಲ್ಪ ಮಳೆಯಾದರೂ ವಾರಗಟ್ಟಲೇ ಹರಿಯುವ ಈ ನೀರಿನ ಪ್ರವಾಹದಿಂದ ಸುಮಾರು 5,6 ಗ್ರಾಮಗಳ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಮೇಲ್ಮಟ್ಟದ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಕೂಡಲೇ ಸೇತುವೆ ನಿರ್ಮಾಣ ಕಾರ್ಯ ತ್ವರಿತವಾಗಿ ಮುಗಿಸಿ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕೆಂಬುದು ಗ್ರಾಮಸ್ಥರ ಹಾಗೂ ಪ್ರಯಾಣಿಕರ ಒತ್ತಾಸೆಯಾಗಿದೆ.