ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಶ್ವಾನ ಪ್ರದರ್ಶನ: ಗಮನ ಸೆಳೆದ ವಿವಿಧ ತಳಿಗಳು

ವಿಜಯಪುರ ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಇಂದು ಶ್ವಾನ ಪ್ರದರ್ಶನ ನಡೆಯಿತು.

dog-show-in-vijayapura
ವಿಜಯಪುರ: ಶ್ವಾನ ಪ್ರದರ್ಶನ, ಗಮನ ಸೆಳೆದ ವಿವಿಧ ಶ್ವಾನ ತಳಿಗಳು

By ETV Bharat Karnataka Team

Published : Dec 17, 2023, 7:33 PM IST

Updated : Dec 17, 2023, 8:09 PM IST

ವಿಜಯಪುರದಲ್ಲಿ ಶ್ವಾನ ಪ್ರದರ್ಶನ

ವಿಜಯಪುರ: ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಶ್ವಾನ ಪ್ರದರ್ಶನ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರದರ್ಶನವನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್​ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಯತ್ನಾಳ್​, "ಶ್ವಾನಗಳ ಪ್ರದರ್ಶನವು ಪ್ರಾಣಿಪ್ರಿಯರಿಗೆ ಪ್ರೋತ್ಸಾಹ ಕೊಡುವ ಕಾರ್ಯಕ್ರಮವಾಗಿದೆ. ತಮ್ಮ ಸಾಕುನಾಯಿಗಳನ್ನು ಪ್ರದರ್ಶಿಸಲು ಮಾಲೀಕರು ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬಂದಿದ್ದಾರೆ. ಶ್ವಾನಗಳನ್ನು ಉತ್ತಮವಾಗಿ ಸಾಕಿದವರಿಗೆ ಸರ್ಕಾರವು ಮೊದಲ ಬಹುಮಾನವಾಗಿ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನವಾಗಿ 7 ಸಾವಿರ ರೂಪಾಯಿ ನೀಡುತ್ತಿದೆ. ಸಿದ್ಧಶ್ರೀ ಸೌಹಾರ್ದ ಸಹಕಾರ ಬ್ಯಾಂಕ್​ ವತಿಯಿಂದ ಶ್ವಾನ ಪ್ರದರ್ಶನಕ್ಕೆ ಪ್ರತಿ ವರ್ಷ 51 ಸಾವಿರ ರೂ ಕೊಡುತ್ತೇವೆ" ಎಂದು ಘೋಷಿಸಿದರು.

"ಶ್ವಾನಗಳು ದೇಶದ ಗಡಿಯಲ್ಲಿ ಸೈನಿಕರಂತೆ ಕೆಲಸ ಮಾಡುತ್ತಿವೆ. ಎಲ್ಲಿ ಬಾಂಬ್​ ಇದೆ, ಭಯೋತ್ಪಾದಕರು ಎಲ್ಲಿ ಅಡಗಿ ಕುಳಿತಿದ್ದಾರೆ ಎಂಬುದನ್ನು ಪತ್ತೆ ಮಾಡುವ ಮುಖೇನ ಅಹಿತಕರ ಘಟನೆಗಳನ್ನು ತಡೆಯುವ ಕೆಲಸ ಮಾಡುತ್ತಿವೆ. ಒಬ್ಬ ಸೈನಿಕನಿಗೆ ಕೊಡುವ ಗೌರವವನ್ನು ಸೇನೆಯಲ್ಲಿ ಸೇವೆ ಮಾಡುವ ಶ್ವಾನಕ್ಕೂ ಕೊಡುತ್ತಾರೆ" ಎಂದು ಹೇಳಿದರು.

ಮುಖ್ಯ ಪಶು ವೈದ್ಯಾಧಿಕಾರಿ ಡಾ.ಬಸವರಾಜ ಕನಮಡಿ ಮಾತನಾಡಿ, "ಪಶುಪಾಲನಾ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಸುಮಾರು 12ರಿಂದ 15ಕ್ಕೂ ಹೆಚ್ಚು ತಳಿಯ 250ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿವೆ. ರೇಬೀಸ್​ಲಸಿಕೆಯನ್ನು ಶ್ವಾನಗಳಿಗೆ ಉಚಿತವಾಗಿ ಹಾಕುತ್ತಿದ್ದೇವೆ. ರೇಬೀಸ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದೇವೆ.​ ನಿರುದ್ಯೋಗಿ ಯುವಕರು ಶ್ವಾನ ತಳಿಗಳನ್ನು ಅಭಿವೃದ್ಧಿಪಡಿಸಿ, ಆದಾಯಗಳಿಸಬಹುದು. ಇದರಿಂದ ನಿರುದ್ಯೋಗ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಲಿದೆ" ಎಂದರು.

"ಶ್ವಾನಗಳಿಗೆ ಸಂಬಂಧಿಸಿದ ಆಹಾರ ಸೇರಿದಂತೆ ಇತರೆ ವಸ್ತುಗಳ ಮಾರಾಟದಿಂದ ಆದಾಯ ಪಡೆಯುತ್ತಿದ್ದಾರೆ. ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 15ರಿಂದ 20 ಲಕ್ಷ ರೂ ವಹಿವಾಟು ಶ್ವಾನಗಳಿಂದಲೇ ನಡೆಯುತ್ತಿದೆ. ಜರ್ಮನ್​ ಶರ್ಫಡ್​, ಪಿಟ್​ಬುಲ್​, ಲ್ಯಾಬ್ರಡಾರ್, ಚೌಚೌ ಹಾಗೂ ಪಮೋರಿಯನ್ ಸೇರಿದಂತೆ ಹಲವಾರು ತಳಿಯ ಶ್ವಾನಗಳನ್ನು ಇಲ್ಲಿ ನೋಡಬಹುದು. 10 ಸಾವಿರದಿಂದ 2 ಲಕ್ಷ ರೂ.ವರೆಗೆ ಬೆಲೆಬಾಳುವ ಶ್ವಾನಗಳು ಪ್ರದರ್ಶನಕ್ಕೆ ಬಂದಿವೆ" ಎಂದು ತಿಳಿಸಿದರು.

ಶ್ವಾನ ಮಾಲೀಕರಾದ ಶ್ರದ್ಧಾ ಪಟ್ಟಣ ಮಾತನಾಡಿ, "ನಾನು ಶ್ವಾನ ಪ್ರದರ್ಶನಕ್ಕೆ ಚೌಚೌ ತಳಿಯ ಶ್ವಾನ ಕರೆತಂದಿದ್ದೇನೆ. ಇದು ಯುರೋಪಿಯನ್​ ತಳಿ. ಇದರ ಬೆಲೆ 65 ಸಾವಿರ ರೂ ಇದೆ" ಎಂದು ಹೇಳಿದರು.

ಪ್ರದರ್ಶನದಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶ್ವಾನಪ್ರಿಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ವಾಹನಗಳನ್ನು ಎತ್ತಿ ಬಿಸಾಡಿದ ಒಂಟಿ ಸಲಗ; ಗಜರಾಜನ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಜನ

Last Updated : Dec 17, 2023, 8:09 PM IST

ABOUT THE AUTHOR

...view details