ವಿಜಯಪುರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಈಗ ಸೂಪರ್ ಸಿಎಂ ಆಗಿದ್ದಾರೆ. ಆದ್ರೆ, ಯಾವ ಕಾಲಕ್ಕೂ ಸಿಎಂ ಆಗಲ್ಲ. ಸಿಎಂ ಸಿದ್ದರಾಮಯ್ಯಗೆ ಬಹಳ ನೋವಿದೆ. ಕಾಂಗ್ರೆಸ್ನ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂದು ಟೀಕಿಸಿದರು. ಸಿಎಂ ಕೂಡ ಸುಮ್ಮನೆ ಹುದ್ದೆಯಲ್ಲಿ ಇದ್ದಾರೆ. ಆದ್ರೆ, ಆಡಳಿತ ಮಾತ್ರ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ. ಇನ್ನು ಆರು ತಿಂಗಳೇ ಆಗ್ಲಿ, ಐದು ವರ್ಷವೇ ಆಗ್ಲಿ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರುತ್ತಾರೆ ಎಂದರು.
ಇದೇ ವೇಳೆಕಾಂಗ್ರೆಸ್ ತಳಿ ರಾಕ್ಷಸರದ್ದು ಎಂದು ಯತ್ನಾಳ್ ಕಿಡಿಕಾರಿದರು. ಬಿಜೆಪಿಗೆ ಓಟು ಹಾಕಿದವರು ರಾಕ್ಷಸರು ಎಂಬ ಸುರ್ಜೆವಾಲಾ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ವಂಶದ ಬ್ಯಾಗ್ರೌಂಡ್ ಸರಿ ಇಲ್ಲ, ಕಾಂಗ್ರೆಸ್ನದ್ದು ಹೈಬ್ರಿಡ್ ತಳಿ. ಬಿಜೆಪಿಗೆ ಓಟು ಹಾಕಿದವರು ರಾಕ್ಷಸರು ಎಂದು ದೇಶದ ಮತದಾರರನ್ನು ಅವಮಾನ ಮಾಡಿದ್ದಾರೆ. ಇದನ್ನು ಮತದಾರರು ತಿಳಿದುಕೊಳ್ಳಬೇಕು. ಮತದಾರರನ್ನು ರಾಕ್ಷಸ ಎನ್ನುವ ಮನಸ್ಥಿತಿ ಅವರದ್ದು ಎಂದು ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಮೂರು ದಿನಗಳ ಹಿಂದಷ್ಟೇ ಕಾಂಗ್ರೆಸ್ ಸರ್ಕಾರ ಕೆಲವೇ ತಿಂಗಳಲ್ಲಿ ಪತನಗೊಳ್ಳಲಿದೆ ಎಂಬ ಅಚ್ಚರಿಯ ಹೇಳಿಕೆಯನ್ನು ಯತ್ನಾಳ ನೀಡಿದ್ದರು. "ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಮೂರು ತಿಂಗಳ ಹಿಂದೆ ಇದ್ದ ಹಾಗಿಲ್ಲ. ಇನ್ನಾರು ತಿಂಗಳಲ್ಲಿ ಸರ್ಕಾರ ಉರುಳಲಿದೆ" ಎಂದು ಹೇಳಿದ್ದರು.