ವಿಜಯಪುರ:ಬಸವನಾಡು ವಿಜಯಪುರ ನಗರದ ಮಠಪತಿ ಬಡವಾಣೆಯಲ್ಲಿ ಪ್ರತಿ ವರ್ಷ ದೀಪಾವಳಿ ಹಬ್ಬದ ಬಲಿಪಾಡ್ಯದ ದಿನ ಎಮ್ಮೆಗಳ ಓಟ ಆಯೋಜಿಸಲಾಗುತ್ತದೆ. ಎಮ್ಮೆಗಳ ಓಟ ನೋಡಲು ಗುಮ್ಮಟ ನಗರಿ ಜನರು ಕಿಕ್ಕಿರಿದು ಸೇರುತ್ತಾರೆ. ಇವುಗಳಿಗೆ ಜಾನಪದ ವಾದ್ಯದ ಸದ್ದು ಸಾಥ್ ನೀಡಿರುತ್ತದೆ. ವರ್ಷವಿಡೀ ಜೀವನಕ್ಕೆ ಆಸರೆಯಾಗಿರುವ ಎಮ್ಮೆಗಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಗೌಳಿ ಸಮುದಾಯದ ಜನರು ಎಮ್ಮೆಗಳ ಓಟ ಆಯೋಜಿಸಿಕೊಂಡು ಬಂದಿದ್ದಾರೆ.
ಎಮ್ಮೆಗಳಿಗೂ ವಿಶೇಷ ಪೂಜೆ: ಗೌಳಿ ಸಮುದಾಯದ ಜನರು ಎಮ್ಮೆ ಸಾಕಾಣಿಕೆ ಮಾಡಿ, ಹಾಲು ಮಾರಾಟದಿಂದ ಜೀವನ ಮಾಡ್ತಾರೆ. ಹೀಗಾಗಿ ಜೀವನಕ್ಕೆ ಆದಾಯ ನೀಡುವ ಎಮ್ಮೆಗಳಿಗೂ ದೀಪಾವಳಿ ಬಲಿಪಾಡ್ಯ ದಿನದಂದು ಕೊರಳಿಗೆ ಗೆಜ್ಜೆ, ಹೂವುಗಳ ಅಲಂಕಾರ, ಕೊಂಬಿಗೆ ಬಣ್ಣ ಬಳಿದು ಬಳಿಕ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಎಮ್ಮೆಗಳ ಓಟ ಜನರಿಗೆ ಮನರಂಜನೆ: ದೀಪಾವಳಿ ಬಲಿಪಾಡ್ಯ ದಿನ ಸಂಜೆ ಸಮಯದಲ್ಲಿ ಎಮ್ಮೆಗಳ ಆಯಾಸ ತಣಿಸಲು, ಎಮ್ಮೆಗಳು ಸದೃಢವಾಗಿ ಬೆಳೆಯಲು ಗೌಳಿ ಸಮುದಾಯದ ಜನರು ಎಮ್ಮೆಗಳ ಓಟ ನಡೆಸುವ ಮೂಲಕ ಅವುಗಳಿಗೂ ಮನರಂಜನೆ ನೀಡುತ್ತಾರೆ. ಇವುಗಳ ಓಟ ನೋಡಲು ನಗರದ ಜನರು ಕಿಕ್ಕಿರಿದು ಸೇರಿ ಸಿಳ್ಳೆ, ಚಪ್ಪಾಳೆ ಮೂಲಕ ಓಟಕ್ಕೆ ಪ್ರೋತ್ಸಾಹ ನೀಡುತ್ತಾರೆ.
ಶತಮಾನದ ಇತಿಹಾಸ: ಇನ್ನು ಎಮ್ಮೆ ಮನೆ ಮಹಾಲಕ್ಷ್ಮೀ ಎಂದು ಭಾವಿಸಲಾಗುತ್ತದೆಯಂತೆ. ಹೀಗಾಗಿ ಓಟದ ಪಂದ್ಯ ಆಯೋಜನೆ ಮಾಡವುದು. ಗೌಳಿ ಸಮುದಾಯದಲ್ಲಿ ಇದಕ್ಕೆ 150 ವರ್ಷಗಳ ಇತಿಹಾಸವಿದೆಂತೆ. ಹಿರಿಯರ ಕಾಲದಿಂದಲೂ ಎಮ್ಮೆಗಳ ಓಟ ನಡೆಸಿಕೊಂಡು ಬರಲಾಗುತ್ತಿದೆ ಎಂದು ಗೌಳಿ ಸಮುದಾಯದ ಮುಖಂಡರು ಹೇಳುತ್ತಿದ್ದಾರೆ.
ಎಮ್ಮೆಗಳಿಗೂ ಓಟದ ತರಬೇತಿ: ಎಮ್ಮೆ ಮೇಯಿಸಲು ಹೊಲಗಳಿಗೆ ಹೋದಾಗ ಓಟ ನಡೆಸುವುದು, ಕಂಬಳಿ ಹಾಯಿಯುವುದು ಹಾಗೂ ದ್ವಿಚಕ್ರ ವಾಹನದ ಹಿಂದೆ ಓಡುವ ತರಬೇತಿ ನೀಡಲಾಗುತ್ತದೆ. ಬಳಿಕ ದೀಪಾವಳಿ ಹಬ್ಬಕ್ಕೆ ಓಟ ನಡೆಸಿ, ಓಟದಲ್ಲಿ ಸಾಹಸ ತೋರಿದ ಎಮ್ಮೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ.