ವಿಜಯಪುರ: ವೈದ್ಯರ ಬಳಿ ಬರುವ ರೋಗಿಗಳಲ್ಲಿ ತೀವ್ರ ಉಸಿರಾಟ ತೊಂದರೆ, ನೆಗಡಿ, ಕೆಮ್ಮು, ಜ್ವರ ಸಂಬಂಧಿತ ಯಾವುದೇ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಮತ್ತು ಅಂತಹ ಲಕ್ಷಣಗಳವುಳ್ಳ ರೋಗಿಗಳಿಂದ ಗಂಟಲು ದ್ರವ ಮಾದರಿ ಪಡೆಯಿರಿ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದ್ದಾರೆ.
ತೀವ್ರ ಉಸಿರಾಟ ತೊಂದರೆ, ಕೆಮ್ಮು,ಜ್ವರ ಸಂಬಂಧಿತ ರೋಗಿ ಚಿಕಿತ್ಸೆಗೆ ಬಂದ ತಕ್ಷಣ ಮಾಹಿತಿ ನೀಡಿ..ಜಿಲ್ಲಾಧಿಕಾರಿ ಸೂಚನೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೋಗಿಗಳಲ್ಲಿ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟ ಸಂಬಂಧಿತ ತೊಂದರೆಗಳಿಂದ ಬಳಲುತ್ತಿರುವವರ ಬಗ್ಗೆ ದೂರವಾಣಿ ಸಂಖ್ಯೆ 9739224889 (ಭೀಮರಾವ ಮಮದಾಪೂರ) ಅವರಿಗೆ ವೈದ್ಯರು ತಕ್ಷಣ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಈ ಮಾಹಿತಿ ಲಭ್ಯವಾದ ತಕ್ಷಣ ಇಂತಹ ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸಿ. ತೀವ್ರ ಉಸಿರಾಟ ತೊಂದರೆ ಸಂಬಂಧಿಸಿದ ಪ್ರಕರಣಗಳಲ್ಲಿ ಟ್ರೂನ್ಯಾಟ್ ಯಂತ್ರದ ಮೂಲಕ ಗಂಟಲು ದ್ರವ ಮಾದರಿಗೆ ಒಳಪಡಿಸಿ. ಪಾಸಿಟಿವ್ ಬಂದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ಐಎಲ್ಐ ಪ್ರಕರಣಗಳಲ್ಲಿಯೂ ಗಂಟಲು ದ್ರವ ಮಾದರಿಗೆ ಒಳಪಡಿಸಿದ ನಂತರ ಆನ್‍ಲೈನ್ ನೋಂದಣಿ ಮತ್ತು ಆಪ್‍ಲೋಡ್‍ಗೆ ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.
ಜಿಲ್ಲೆಯ ಆಯುರ್ವೇದ, ಯೂನಾನಿ, ಹೋಮಿಯೋಪತಿ ವೈದ್ಯರ ಬಳಿ ಐಎಲ್ಐ ಮತ್ತು ಸಾರಿ ಪ್ರಕರಣಗಳು ಬಂದ ತಕ್ಷಣ ಮೇಲಿನ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಬೇಕು. ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಸೂಕ್ತ ರೀತಿಯಲ್ಲಿ ನೆರವಾಗಬೇಕು. ಇಂತಹ ಪ್ರಕರಣಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮತ್ತು ಲೋಪ ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್-19 ರೋಗ ವಿಸ್ತರಣೆ ತಡೆಯಲು ಮತ್ತು ಸಾವುಗಳನ್ನು ತಪ್ಪಿಸಲು ತಕ್ಷಣ ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರತಿ ಐಎಲ್‍ಐ ಮತ್ತು ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸಬೇಕು. ಈ ಕುರಿತು ಐಎಂಎ ಸಂಸ್ಥೆಯಡಿ ನೊಂದಾಯಿಸಿಕೊಂಡಿರುವ ವೈದ್ಯರು, ಕಂಟೇನ್ಮೆಂಟ್ ವಲಯ ಮತ್ತು ಬಫರ್ ಝೋನ್‍ಗಳಲ್ಲಿನ ಪ್ರತಿ ವೈದ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಐಎಲ್ಐ ಹಂತದಲ್ಲಿಯೇ ರೋಗಿಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಬೇಕು. ಇವರೊಂದಿಗೆ ಸಂಪರ್ಕ ಗುರುತಿಸುವ ಕಾರ್ಯ ಸಹ ಅಚ್ಚುಕಟ್ಟಾಗಿ ನಡೆಯಬೇಕು. ಅದರಂತೆ ಐಎಲ್ಐ ಮತ್ತು ಸಾರಿ ಪ್ರಕರಣಗಳಿಗೆ ಪ್ರಾಥಮಿಕ ಸಂಪರ್ಕಗಳ ಬಗ್ಗೆ ಮತ್ತು ಹೋಂ ಕ್ವಾರಂಟೈನ್ ಬಗ್ಗೆ ತೀವ್ರ ನಿಗಾ ಇಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.