ವಿಜಯಪುರ:ವಿವಿಧ ರಾಜ್ಯಗಳಿಂದ ಆಗಮಿಸಿರುವ ಕಾರ್ಮಿಕರಿಗೆ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರೈಸುವ ಕಾರ್ಮಿಕರನ್ನು ನಂತರ ಕಟ್ಟುನಿಟ್ಟಿನ ಹೋಮ್ ಕ್ವಾರಂಟೈನ್ ಮಾಡಿ ನಿಗಾ ಇಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗುಜರಾತ್ನಿಂದ ಆಗಮಿಸಿರುವ ಕಾರ್ಮಿಕರನ್ನು ಹೋಮ್ ಕ್ವಾರಂಟೈನ್ ಮಾಡುವಾಗ ಪ್ರತಿಯೊಬ್ಬರು ಕ್ವಾರಂಟೈನ್ ವಾಚ್ ಆ್ಯಪ್‍ನ್ನು ಡೌನ್‍ಲೋಡ್ ಮಾಡುವಂತೆ ಸೂಚಿಸಬೇಕು. ಅಧಿಕಾರಿಗಳು ಕಾರ್ಮಿಕರನ್ನು ಹೋಮ್ ಕ್ವಾರಂಟೈನ್ ಮಾಡಿದ ನಂತರ ಅವರ ಒಂದು ಸೇಲ್ಫಿಯನ್ನು ಈ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡುವಂತೆ ಸೂಚಿಸಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿದಂತೆ ವಿವಿಧ ವಸತಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಗ್ರಾಮ ಮಟ್ಟದ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು, ತಾಲೂಕು ಮಟ್ಟದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ತಹಶೀಲ್ದಾರ್ಗಳು ಸೂಕ್ತ ನಿಗಾ ಇಡಬೇಕು ಎಂದರು.