ವಿಜಯಪುರ:ಭಾರಿ ಮಳೆ ಹಾಗೂ ಪ್ರವಾಹದಿಂದಹಾನಿಗೊಳಗಾದ ಬೆಳೆ ಮತ್ತು ಮನೆಯ ಬಗ್ಗೆ ಕೇಂದ್ರ ನೆರೆ ಅಧ್ಯಯನ ತಂಡಕ್ಕೆ ಸಿಂದಗಿಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಮಾಹಿತಿ ನೀಡಿದರು.
ಹೈದರಾಬಾದ್ ಕೃಷಿ ಮತ್ತು ರೈತ ಸಚಿವಾಲಯದ ಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ಮನೋಹರನ್, ಬೆಂಗಳೂರು ಜಲಶಕ್ತಿ ಸಚಿವಾಲಯದ (ಹೆಚ್‍ಒ ಮತ್ತು ಪಿಪಿ) ಅಧೀಕ್ಷಕ ಅಭಿಯಂತರ ಜೆ ಗುರು ಪ್ರಸಾದ್ ಹಾಗೂ ನೈಸರ್ಗಿಕ ವಿಕೋಪ ಕೇಂದ್ರ (ಕೆಎಸ್‍ಎನ್‍ಡಿಎಮ್‍ಸಿ) ಕಂದಾಯ ಇಲಾಖೆಯ ಸಿನಿಯರ್ ಕನ್ಸಲ್ಟಂಟ್ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ಅವರನ್ನು ಒಳಗೊಂಡ ಮೂವರು ಅಧಿಕಾರಿಗಳ ತಂಡವು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿತು. ಇದೇ ವೇಳೆ ಸಿಂದಗಿಗೆ ಆಗಮಿಸಿ ತಹಶೀಲ್ದಾರ್ ಕಚೇರಿಯಲ್ಲಿ ಹಾನಿಯ ಕುರಿತು ಮಾಹಿತಿ ಕಲೆಹಾಕಿದರು.
ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಪಿಪಿಟಿ ಮೂಲಕ ಅಧ್ಯಯನ ತಂಡಕ್ಕೆ ಭೀಮಾ ಹಾಗೂ ಡೋಣಿ ನದಿಯಿಂದ ಪ್ರವಾಹಕ್ಕೊಳಗಾದ ಹಾಗೂ ಅಕ್ಟೋಬರ್ 11ರಿಂದ 22ರವರೆಗೆ ಸುರಿದ ಭಾರಿ ಮಳೆಯ ಹಾನಿಯ ಬಗ್ಗೆ ಮಾಹಿತಿ ಒದಗಿಸಿದರು.
ಅಕ್ಟೋಬರ್ 13 ಮತ್ತು 14ರಂದು ಭೀಮಾ ನದಿ ಪ್ರವಾಹಕ್ಕೆ ಚಡಚಣ, ಇಂಡಿ ಹಾಗೂ ಸಿಂದಗಿ ತಾಲೂಕುಗಳ 28 ಗ್ರಾಮಗಳು ತುತ್ತಾಗಿದ್ದವು. 4,041 ಮನೆಗಳಿಗೆ ನೀರು ನುಗ್ಗಿದ್ದು, ಜಿಲ್ಲಾಡಳಿತದಿಂದ ಪ್ರವಾಹ ಸಂತ್ರಸ್ತರಿಗೆ ತಲಾ 10,000 ರೂ. ಪರಿಹಾರ ನೀಡಲಾಗಿತ್ತು ಎಂದರು.
ರಕ್ಷಣಾ ತಂಡಗಳು ಪ್ರವಾಹದಲ್ಲಿ ಸಿಲುಕಿದ್ದ 1,516 ಜನರನ್ನು ರಕ್ಷಿಸಿವೆ. 42 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಜಿಲ್ಲೆಯಲ್ಲಿ 12 ಜನರು ಹಾಗೂ 13 ಜಾನುವಾರು ಸಾವನ್ನಪ್ಪಿವೆ. 2,07,146.00 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ತೋಟಗಾರಿಕಾ ಬೆಳೆ ಪ್ರಮಾಣ 11,929.10 ಹೆಕ್ಟೇರ್ನಷ್ಟಿದೆ. ಮೂಲಸೌಕರ್ಯ ಹಾನಿಯ ಬಗ್ಗೆಯೂ ಅಧ್ಯಯನ ತಂಡದ ಗಮನಕ್ಕೆನ ತಂದರು.
ಅಧ್ಯಯನ ತಂಡವು ಸಿಂದಗಿ ಸಮೀಪದ ರಾಂಪೂರ ಗ್ರಾಮದಲ್ಲಿ ತೊಗರಿ ಮತ್ತು ಹತ್ತಿ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿ, ಅಧಿಕಾರಿಗಳು ಮತ್ತು ರೈತರಿಂದ ಮಾಹಿತಿ ಪಡೆಯಿತು. ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ಕೃಷಿ ಜಂಟಿ ನಿರ್ದೇಶಕ ರಾಜಶೇಖರ್ ವಿಲಿಯಮ್ಸ್, ವಿಜಯಪುರ ಉಪವಿಭಾಗಾಧಿಕಾರಿ ರಾಮಚಂದ್ರ, ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ರಾಕೇಶ ಜೈನಾಪೂರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.