ಮುದ್ದೇಬಿಹಾಳ:ಸಿಡಿಲು ಬಡಿದು ಅ.4 ರಂದು ಸಾವನ್ನಪ್ಪಿದ ತಾಲೂಕಿನ ಇಣಚಗಲ್ ಗ್ರಾಮದ ರೈತ ಹುಲಗಪ್ಪ ವಾಯ್ ಮಾದರ ಕುಟುಂಬಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಐದು ಲಕ್ಷ ರೂ.ಪರಿಹಾರ ಧನ ವಿತರಿಸಿದರು.
ಭಾರಿ ಮಳೆಯಿಂದ ಸಿಡಿಲಿನ ಹೊಡೆತಕ್ಕೆ ಭಯ ಬಿದ್ದು ಎತ್ತುಗಳು ಮನೆಗೆ ವಾಪಸ್ ಆಗಿದ್ದವು. ಎತ್ತುಗಳ ಜೊತೆಗೆ ರೈತ ಹುಲಗಪ್ಪ ಬಾರದೇ ಇರುವುದರಿಂದ ಸಂಶಯಗೊಂಡ ರೈತನ ಪತ್ನಿ ದೇವಮ್ಮ ಅಕ್ಕಪಕ್ಕದ ಹೊಲದವರ ಬಳಿ ವಿಚಾರಿಸಿದ್ದರು. ಆಗ ಯಾರಿಂದಲೂ ಸಮರ್ಪಕ ಉತ್ತರ ಬಾರದ್ದರಿಂದ ಹೊಲಕ್ಕೆ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿತ್ತು.
ಸಾವನ್ನಪ್ಪಿದ ರೈತನ ಕುಟುಂಬಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಐದು ಲಕ್ಷ ರೂ.ಪರಿಹಾರ ಧನ ವಿತರಿಸಿದರು. ಈ ವೇಳೆ ಮಾತನಾಡಿದ ಶಾಸಕ ನಡಹಳ್ಳಿ, ಸಿಡಿಲಿನ ಸಂದರ್ಭ ಗೋಚರಿಸಿದಾಗ ಯಾವುದೇ ಕಾರಣಕ್ಕೂ ಮರಗಳ ಕೆಳಗಡೆ ನಿಲ್ಲಬಾರದು. ಸಿಡಿಲಿನಿಂದ ರಕ್ಷಿಸಿಕೊಳ್ಳಲು ಇರುವ ಮಾರ್ಗಗಳನ್ನು ತಿಳಿದುಕೊಂಡು ಜಾಗೃತರಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಯಿ ಸಾಬವ್ವ ಮಾದರ, ಪತ್ನಿ ದೇವಮ್ಮ ಮಾದರ, ತಹಶೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಘಮೋಡೆ, ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಪವಾಡೆಪ್ಪಗೌಡ ಹವಾಲ್ದಾರ್, ರಾಮನಗೌಡ ಪಾಟೀಲ ಇದ್ದರು.