ವಿಜಯಪುರ: ವಿವಿಧ ರಾಜ್ಯ, ವಿದೇಶಿಗಳಿಗೆ ಉತ್ತಮ ಗುಣಮಟ್ಟದ ದ್ರಾಕ್ಷಿ ಬೆಳೆ ಸರಬರಾಜು ಮಾಡುವ ದ್ರಾಕ್ಷಿ ಕಣಜ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ದ್ರಾಕ್ಷಿಗೆ ಡವಣಿ ಹಾಗೂ ಎಲೆ ಉದುರು ರೋಗ ತಗುಲಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದ್ರಾಕ್ಷಿ ಬೆಳೆಗಾರ ಮತ್ತೊಮ್ಮೆ ದ್ರಾಕ್ಷಿಗೆ ತಗುಲಿದ ರೋಗದಿಂದ ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ.
ಐತಿಹಾಸಿಕ ಪ್ರವಾಸಿಗರ ತಾಣ ವಿಜಯಪುರ ಜಿಲ್ಲೆ ಬರದ ನಾಡು ಆಗಿದ್ದರೂ ಸಹ ತೋಟಗಾರಿಕೆ ಬೆಳೆಗೆ ಪ್ರಸಿದ್ಧಿ ಪಡೆದುಕೊಂಡಿದೆ. ರಾಜ್ಯದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆ ಬೆಳೆಯುವ ಕ್ಷೇತ್ರವಾಗಿದೆ. ಪ್ರಸಕ್ತ ವರ್ಷ 14,800 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಮಾರ್ಚ್ ತಿಂಗಳಿನಲ್ಲಿ ದ್ರಾಕ್ಷಿ ಬೆಳೆ ಹಾಕಲಾಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆ ಜತೆಗೆ ತಂಪು ವಾತಾವರಣ ಸೃಷ್ಟಿಯಾದ ಕಾರಣ ದ್ರಾಕ್ಷಿ ಗಿಡದಲ್ಲಿ ಬೆಳೆದಿರುವ ಎಲೆಗೆ ಡವಣಿ ಹಾಗೂ ಕಪ್ಪು ರೋಗ ಬಾಧಿಸಿದೆ. ಇದರ ಪರಿಣಾಮ ಎಲೆ ಕಪ್ಪಾಗಿ ಉದುರುತ್ತಿದ್ದು, ಹೂ ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಕಂಗಾಲಾದ ರೈತ, ಕೀಟನಾಶಕ ಸಿಂಪಡಿಸಲು ಮುಂದಾಗಿದ್ದ. ಕೊರೊನಾದಿಂದ ಔಷಧಿ ಸರಿಯಾದ ಸಮಯಕ್ಕೆ ಸಿಗದೇ ದ್ರಾಕ್ಷಿ ಎಲೆಗಳು ಕಪ್ಪಾಗಿ ಉದುರುತ್ತಿವೆ. ಇಷ್ಟರೊಳಗೆ ಹೂ ಬಿಟ್ಟಿದ್ದರೆ ಬರುವ ಅಕ್ಟೋಬರ್ನಲ್ಲಿ ಕಟಾವು ಮಾಡಿ ದ್ರಾಕ್ಷಿ ಹಣ್ಣು ಬೆಳೆಯಲು ತಯಾರು ಮಾಡಬೇಕಾಗಿತ್ತು. ಆದರೆ ಎಲೆ ಉದುರುತ್ತಿರುವ ಕಾರಣ ಹೂವು ಇಲ್ಲದೆ ದ್ರಾಕ್ಷಿ ಬೆಳೆ ಬೆಳೆಯುವುದಿಲ್ಲ ಎಂದು ಲಕ್ಷಾಂತರ ರೂ. ಖರ್ಚು ಮಾಡಿ ಕಟಾವು ಮಾಡುವುದನ್ನು ರೈತ ಕೈ ಬಿಟ್ಟಿದ್ದಾನೆ.