ಕರ್ನಾಟಕ

karnataka

ETV Bharat / state

ಮುಳುಗಡೆಯಾದರೂ ಗ್ರಾಮ ತೊರೆಯಲು ಮನಸು ಮಾಡದ ಜೀವಗಳು: ಪ್ರತ್ಯಕ್ಷ ವರದಿ

ಗ್ರಾಮದಲ್ಲಿ ಚಿಕ್ಕಮಕ್ಕಳು, ವಯೋವೃದ್ಧರು, ರೋಗದಿಂದ ಬಳಲುತ್ತಿದ್ದವರಿದ್ದಾರೆ. ಗ್ರಾಮ ತೊರೆಯುವ ಮನಸ್ಸು ಮಾತ್ರ ಬರುತ್ತಿಲ್ಲ. ಜಾನುವಾರುಗಳು, ಹೊಲ ಮನೆಗಳ ಜತೆ ನಮ್ಮ ಅವಿನಾಭಾವ ಸಂಬಂಧವಿದೆ. ಅದನ್ನು ಬಿಟ್ಟು ಹೋಗುವುದಾದರೂ ಹೇಗೆ? ಮತ ಕೇಳಲು ಬರುವ ಜನಪ್ರತಿನಿಧಿಗಳು ನಾವು ಸಂಕಷ್ಟದಲ್ಲಿ ಇದ್ದರೂ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಜಲ ದಿಗ್ಭಂದನಕ್ಕೆ ಒಳಗಾದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Direct Report from ETV BHARAT about flood situation
ಜಲದಿಗ್ಭಂದನಕ್ಕೊಳಗಾದ ಗ್ರಾಮಸ್ಥರು

By

Published : Oct 17, 2020, 9:14 PM IST

Updated : Oct 17, 2020, 11:31 PM IST

ವಿಜಯಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವ ಕಾರಣ ಹಳೆ ಉಮರಾಣಿ ಗ್ರಾಮ ಸಂಪೂರ್ಣ ಸಂಪರ್ಕ ಕಳೆದುಕೊಂಡಿತ್ತು. ಹೊಸ ಉಮರಾಣಿಯಲ್ಲಿ 1 ಕಿ.ಮೀ ದೂರದಿಂದ 4 ಅಡಿ ಅಡಿಯಷ್ಟು ನೀರು ತುಂಬಿಕೊಂಡಿದ್ದರಿಂದ ಸಂಪರ್ಕ ಕಡಿತಗೊಂಡಿತ್ತು.‌ ಈಟಿವಿ ಭಾರತ ಪ್ರವಾಹದಲ್ಲಿ ಸಿಲುಕಿದ್ದ ಹಳೆ ಉಮರಾಣಿ ಗ್ರಾಮಕ್ಕೆ ಭೇಟಿ ನೀಡಿ ಪ್ರತ್ಯಕ್ಷ ವರದಿ ಸಿದ್ಧಪಡಿಸಿದೆ.

ಜಲದಿಗ್ಭಂದನಕ್ಕೊಳಗಾದ ಗ್ರಾಮಸ್ಥರು

ಚಡಚಣ ತಾಲೂಕಿನ ಹಳೆ ಉಮರಾಣಿ ಗ್ರಾಮದಲ್ಲಿ ಸುಮಾರು 200 ಕುಟುಂಬಗಳಿದ್ದು ಪ್ರತಿ ವರ್ಷ ಪ್ರವಾಹ ಬಂದಾಗ ಗ್ರಾಮ ಈ ರೀತಿ ಜಲ ದಿಗ್ಭಂದನಕ್ಕೆ ಒಳಗಾಗುತ್ತಲೇ ಬಂದಿದೆ. ಆದರೆ, ಈ ವರ್ಷ ಅಧಿಕ ಪ್ರಮಾಣದಲ್ಲಿ ನೀರು ಬಂದಿರುವ ಕಾರಣ ಕಳೆದ ಮೂರು ದಿನಗಳಿಂದ ಗ್ರಾಮ ಸಂಪರ್ಕ‌ ಕಳೆದುಕೊಂಡಿತ್ತು.‌ ಇಂದು ತಾಲೂಕು ಆಡಳಿತ ಬೋಟ್ ಮೂಲಕ ಗ್ರಾಮಕ್ಕೆ ತೆರಳಿತ್ತು. ಈ ವೇಳೆ, ಈಟಿವಿ ಭಾರತ ಸಹ ಗ್ರಾಮಕ್ಕೆ ಬೋಟ್ ಮೂಲಕ ತೆರಳಿ ಸಂತ್ರಸ್ತರ ಅಳಲು ಆಲಿಸಿತು. 250ಕ್ಕೂ ಜನ ಗ್ರಾಮದಲ್ಲಿ ಸಿಲುಕಿಕೊಂಡಿದ್ದರು. ಎಲ್ಲ ಸಂತ್ರಸ್ತರಿಗೆ 2004ರಲ್ಲಿಯೇ ಮನೆ ನಿರ್ಮಿಸಿಕೊಡಲಾಗಿದೆ. ಆದರೆ, ಆಸ್ತಿ-ಪಾಸ್ತಿ, ಜಾನುವಾರುಗಳನ್ನು ಬಿಟ್ಟು ಬಾರದ ಜನ, ನಾವು ಇಲ್ಲಿಯೇ ಇರುತ್ತೇವೆ ಎಂದು ಈ ಬಾರಿಯೂ ಪಟ್ಟು ಹಿಡಿದು ಕುಳಿತಿದ್ದಾರೆ. ಜಲಾವೃತಗೊಂಡ ಗ್ರಾಮದಲ್ಲಿಯೇ ಮೂರು ದಿನ ಕಳೆದ ಬಳಿಕ ತಾಲೂಕು ಆಡಳಿತ ಒತ್ತಾಯ ಪೂರ್ವಕವಾಗಿ ಕೆಲವರನ್ನು ಸ್ಥಳಾಂತರ ಮಾಡಿದೆ.

ಜಲದಿಗ್ಭಂದನಕ್ಕೊಳಗಾದ ಗ್ರಾಮಸ್ಥರು

ಗ್ರಾಮದಲ್ಲಿ ಚಿಕ್ಕಮಕ್ಕಳು, ವಯೋವೃದ್ಧರು, ರೋಗದಿಂದ ಬಳಲುತ್ತಿದ್ದವರಿದ್ದಾರೆ. ಗ್ರಾಮ ತೊರೆಯುವ ಮನಸ್ಸು ಮಾತ್ರ ಬರುತ್ತಿಲ್ಲ. ಜಾನುವಾರುಗಳು, ಹೊಲ ಮನೆಗಳ ಜತೆ ನಮ್ಮ ಅವಿನಾಭಾವ ಸಂಬಂಧವಿದೆ. ಅದನ್ನು ಬಿಟ್ಟು ಹೋಗುವುದಾದರೂ ಹೇಗೆ? ಮತ ಕೇಳಲು ಬರುವ ಜನಪ್ರತಿನಿಧಿಗಳು ನಾವು ಸಂಕಷ್ಟದಲ್ಲಿ ಇದ್ದರೂ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಜಲದಿಗ್ಭಂದನಕ್ಕೊಳಗಾದ ಗ್ರಾಮಸ್ಥರು

ಹಳೆ ಉಮರಾಣಿ ಗ್ರಾಮಕ್ಕೆ ಪ್ರವಾಹ ಎದುರಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ತಾಲೂಕು ಆಡಳಿತ, ಸ್ಥಳಾಂತರಕ್ಕೆ ಗ್ರಾಮಸ್ಥರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಆದರೆ, ಪ್ರಯೋಜನವಾಗಿರಲಿಲ್ಲ. ನಂತರ ಹೆಚ್ಚುವರಿ ನೀರು ಬಿಡುಗಡೆಯಾದ ಮೇಲೆ ಬಹುತೇಕ ಕುಟುಂಬಗಳು ಗ್ರಾಮದಲ್ಲಿ ಸಿಲುಕಿದ್ದವರನ್ನು ಮನವೊಲಿಸಿ ಅವರನ್ನು ಹೊಸ ಉಮರಾಣಿ ಗ್ರಾಮಕ್ಕೆ ತರುವಲ್ಲಿ ಯಶಸ್ವಿಯಾದರು.

ಮುಳುಗಡೆಯಾದರೂ ಪ್ರದೇಶದಿಂದ ಪ್ರತ್ಯಕ್ಷ ವರದಿ

ತಾಲೂಕು ಆಡಳಿತ ಸದ್ಯ ಎಲ್ಲರನ್ನೂ ಸರ್ಕಾರಿ ಶಾಲೆಯ ಕಾಳಜಿ ಕೇಂದ್ರದಲ್ಲಿ ವಾಸಕ್ಕೆ ಜಾಗ ಮಾಡಿಕೊಟ್ಟಿದೆ. ಆದರೆ, ತಮ್ಮ ಜಾನುವಾರುಗಳನ್ನು ಬಿಟ್ಟು ಬಂದಿರುವ ಜನ ಪ್ರವಾಹ ತಗ್ಗಿದ ಮೇಲೆ ಮತ್ತೆ ವಾಪಸ್ ಗ್ರಾಮಕ್ಕೆ ತೆರಳುವ ಉತ್ಸುಕದಲ್ಲಿದ್ದಾರೆ. ಹಾಗಾಗಿ ಅವರನ್ನು ಮನವೊಲಿಸಿ ಗ್ರಾಮ ಸ್ಥಳಾಂತರವಾದ ಜಾಗದಲ್ಲಿ ಅವರಿಗೆ ವ್ಯವಸ್ಥೆ ಮಾಡುವ ಮೂಲಕ ಶಾಶ್ವತ ಸಮಸ್ಯೆ ಬಗೆಹರಿಸಬೇಕಾಗಿದೆ ಅನ್ನೋದು ಪ್ರಜ್ಞಾವಂತರ ಮನವಿಯಾಗಿದೆ.

Last Updated : Oct 17, 2020, 11:31 PM IST

ABOUT THE AUTHOR

...view details