ಸೋಮೇಶ್ವರ ದೇವಸ್ಥಾನದ ಜಾತ್ರೆ ವಿಜಯಪುರ: ಉತ್ತರ ಕರ್ನಾಟಕದ ಜಾತ್ರೆಗಳೆಂದರೆ ಆಚರಣೆ ಮತ್ತು ಸಂಪ್ರದಾಯದ ಕಾರಣದಿಂದ ಒಂದಕ್ಕಿಂತ ಒಂದು ವಿಭಿನ್ನ. ಇಂಥದೇ ಒಂದು ಜಾತ್ರೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ಜಾತ್ರೆ. ಇಲ್ಲಿರುವ ವೀರಗಲ್ಲಿಗೆ ತಲೆ ಜಜ್ಜಿಕೊಂಡು ದೇವರಿಗೆ ಹರಕೆ ತೀರಿಸುವುದು ಈ ಜಾತ್ರೆಯ ವಿಚಿತ್ರ ಸಂಪ್ರದಾಯ. ಹೀಗೆ ಹರಕೆ ತೀರಿಸುವವರನ್ನು ಬಿಂಗಿಗಳೆಂದು ಕರೆಯುದುಂಟು. ಬೇಡಿಕೆ ಈಡೇರಿದವರು ವೀರಗಲ್ಲಿಗೆ ತಲೆ ಜಜ್ಜಿಕೊಳ್ಳುವುದರಿಂದ ಇದನ್ನು ತಲೆ ಜಜ್ಜಿಕೊಳ್ಳುವ ಜಾತ್ರೆ ಅಂತಲೂ ಕರೆಯುದುಂಟು! ಇದನ್ನೂ ಕಾಣಲೆಂದೇ ಸುತ್ತಮುತ್ತಲ ಜಿಲ್ಲೆಯ ನೂರಾರು ಭಕ್ತರು ಜಾತ್ರೆಗೆ ಆಗಮಿಸುತ್ತಾರೆ.
ಪ್ರತಿವರ್ಷ ಛಟ್ಟಿ ಅಮಾವಾಸ್ಯೆ ಬಳಿಕ ನಡೆಯುವ ಈ ಜಾತ್ರೆ ಮಾತ್ರ ಹರಕೆ ತೀರಿಸುವ ವಿಚಿತ್ರ ಸಂಪ್ರದಾಯದಿಂದ ಗಮನ ಸೆಳೆಯುತ್ತದೆ. ಕಲ್ಲಿಗೆ ಡಿಕ್ಕಿ ಹೊಡೆದು ಹರಕೆ ತೀರಿಸುವ ಭಕ್ತರ ಸೇವೆ ಇಲ್ಲಿನ ವಿಶೇಷ. ಇವರನ್ನು ಬಿಂಗಿಗಳೆಂದು ಸಹ ಕರೆಯಲಾಗುತ್ತದೆ. ಈ ಬಿಂಗಿಗಳು ದೇಗುಲದ ಬಳಿಯ ಕಲ್ಲಿಗೆ ತಲೆ ಜಜ್ಜಿಕೊಂಡು ದೇವರಿಗೆ ಭಕ್ತಿ ಸಮರ್ಪಿಸುವುದು ವಾಡಿಕೆ. ಕಬ್ಬಿನ ಗುಂಡಿನಿಂದ ಬೆನ್ನಿಗೆ ಹೊಡೆದುಕೊಳ್ಳುವುದು, ಮೂರು ಬಾರಿ ಕಲ್ಲಿಗೆ ತಲೆ ಜಜ್ಜಿಕೊಳ್ಳುವುದು ತಲೆತಲಾಂತರದಿಂದ ಬಂದ ಸಂಪ್ರದಾಯ.
ಬಿಂಗಿಗಳಾಗಿ ವೃತಾರಚಣೆ: ''ತಮ್ಮ ಬೇಡಿಕೆ ಈಡೇರಿದರೆ ಬಿಂಗಿಗಳಾಗಿ ವೃತಾರಚಣೆ ಮಾಡುವುದು ಇಲ್ಲಿಯ ವಿಶೇಷ. ಹಾಗಾಗಿ ಸೋಮೇಶ್ವರ ಬೇಡಿದ ವರ ನೀಡುವ ದೇವರು ಅನ್ನೋದು ಇಲ್ಲಿಯವರ ನಂಬಿಕೆ. ದೇವರ ಮಾಲೆ ಹಾಕಿದವರನ್ನು ಬಿಂಗಿಗಳು ಅಂತಲೇ ಕರೆಯುವುದುಂಟು. ಕಾರ್ತಿಕ ಮಾಸದ ಆರಂಭದಿಂದ ಅಂತ್ಯದವರೆಗೂ ಕಠಿಣ ವ್ರತ ಆಚರಿಸುವ ಬಿಂಗಿಗಳು, ಮೆರವಣಿಗೆ ಮೂಲಕ ಈ ಜಾತ್ರೆಯಲ್ಲಿ ಪಾಲ್ಗೊಂಡಿರುತ್ತಾರೆ. ಗ್ರಾಮದ ಭಕ್ತರು ಮಡಿಯಿಂದ ತಯಾರಿಸಿದ ನೈವೇದ್ಯವನ್ನು ಬಿಂಗಿಗಳಿಗೆ ಅರ್ಪಿಸುವುದು ಮತ್ತೊಂದು ವಾಡಿಕೆ. ಕಷ್ಟ ಹೇಳಿಕೊಂಡು ಬರುವ ಭಕ್ತರಿಗೆ ಸೋಮೇಶ್ವರ ಒಳಿತು ಮಾಡುತ್ತಾನೆ ಅನ್ನೋದು ಸುತ್ತಮುತ್ತಲ ಗ್ರಾಮಸ್ಥರ ನಂಬಿಕೆ. ಕೊರೊನಾದಿಂದ ಒಂದೆರೆಡು ವರ್ಷ ಜಾತ್ರೆ ನಿಂತಿತ್ತು. ಆದರೆ, ನೂರಾರು ವರ್ಷದಿಂದಲೂ ಈ ಸಂಪ್ರದಾಯ ಚಾಲ್ತಿಯಲ್ಲಿದೆ'' ಎಂದು ಗ್ರಾಮಸ್ಥರೊಬ್ಬರು ಜಾತ್ರೆಯ ವಿಶೇಷತೆ ಬಿಚ್ಚಿಟ್ಟಿದ್ದಾರೆ.
ದುಂದುವೆಚ್ಚವಿಲ್ಲದ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ, ಪಲ್ಯ, ಅನ್ನ, ಹುಗ್ಗಿ, ಹೋಳಿಗೆ ಸೇರಿದಂತೆ ಇತರೆ ಸಿಹಿ ಭಕ್ಷಗಳನ್ನು ಬಿಂಗಿಗಳಿಗೆ ಬಡಿಸುತ್ತಾರೆ. ನಂತರ ಜಾತ್ರೆಗೆ ಬಂದಂತಹ ಭಕ್ತರು ಪ್ರಸಾದ ಸೇವಿಸುತ್ತಾರೆ. ಜಾತ್ರಾ ಕಮೀಟಿಯಿಂದಲೂ ಪ್ರಸಾದದ ವ್ಯವಸ್ಥೆ ಮಾಡಲಾಗಿರುತ್ತದೆ. ಜಾತ್ರೆಗೆ ಜಿಲ್ಲೆಯ ಜನರಷ್ಟೇ ಅಲ್ಲದೇ ಸುತ್ತಮುತ್ತಲ ಜಿಲ್ಲೆಗಳ ಜನರು ಸಹ ಭಕ್ತಿಭಾವದಿಂದ ಬಂದು ಭಾಗಿಯಾಗುತ್ತಾರೆ. ಹಾಗಾಗಿ ಇದೊಂದು ವಿಭಿನ್ನ ಜಾತ್ರೆ ಅಂತಲೇ ಕರೆತಬಹುದು ಅನ್ನುತ್ತಾರೆ ಸ್ಥಳೀಯರು.
ಹರಕೆ ತೀರಿಸುತ್ತಿರುವ ಭಕ್ತರು