ಕರ್ನಾಟಕ

karnataka

ETV Bharat / state

ಲಂಬಾಣಿ ಸಂಪ್ರದಾಯದ 'ಧುಂಡ್' ಆಚರಣೆ ವೈಶಿಷ್ಟ್ಯ ಏನು?: ನೀವೂ ಒಮ್ಮೆ ನೋಡಿ - ವಿಜಯಪುರದ ಲಂಬಾಣಿ ಸಮುದಾಯದಲ್ಲಿ ಧುಂಡ್ ಆಚರಣೆ

ಹೋಳಿ ಎಂದರೆ ಸಾಮಾನ್ಯವಾಗಿ ಬಣ್ಣದೋಕುಳಿಯಲ್ಲಿ ಮಿಂದೇಳುವುದು. ಆದರೆ, ಲಂಬಾಣಿ ಸಮುದಾಯದವರಿಗೆ ಮಾತ್ರ ಇದೊಂದು ವಿಶಿಷ್ಟ ಆಚರಣೆ. ಹೋಳಿ ಹುಣ್ಣಿಮೆ ಬಂತೆಂದರೆ ಸಾಕು, ಲಂಬಾಣಿ ತಾಂಡಾಗಳಲ್ಲಿ ಎಲ್ಲಿಲ್ಲದಷ್ಟು ಸಂಭ್ರಮ ಮನೆಮಾಡುತ್ತದೆ. ಹೋಳಿಯಂದು ನಡೆಯುವ 'ಧುಂಡ್' ಹೆಸರಿನ ಸ್ವಾರಸ್ಯಕರ ಕಾರ್ಯಕ್ರಮ ಇಲ್ಲಿನ ಪ್ರಮುಖ ಆಕರ್ಷಣೆ.

Dhund celebration in Lambani community
ಧುಂಡ್ ಆಚರಣೆ

By

Published : Mar 30, 2021, 10:03 AM IST

ವಿಜಯಪುರ: ತಾಲೂಕಿನ‌ ಅಲ್ಲಾಪುರ ತಾಂಡಾದಲ್ಲಿ ಜಾಧವ ಎನ್ನುವವರ ಮನೆಯಲ್ಲಿ ನಡೆದ ಸಂಭ್ರಮಾಚರಣೆ ಕೇವಲ ಹೋಳಿ ಹಬ್ಬದ್ದಲ್ಲ, ಅದರ ಜತೆ ವಂಶ ಬೆಳಗುವ ಕುಡಿಗೆ ಹೆಸರಿಡುವ ವಿಶಿಷ್ಟ ಆಚರಣೆ. ಹೋಳಿ ಹುಣ್ಣಿಮೆ ನಂತರ ಜನಿಸುವ ಗಂಡು ಮಗುವಿಗೆ ಮುಂದಿನ ಹೋಳಿ ಹುಣ್ಣಿಮೆ ದಿನ ಹೆಸರಿಡುವ ಸಂಪ್ರದಾಯವೇ 'ಧುಂಡ್ ' ಆಚರಣೆ. ಈ ಗಂಡು ಮಗುವು ಕಳೆದ ವರ್ಷ ಜನಿಸಿರುವ ಕಾರಣ ಒಂದು ವರ್ಷದ ನಂತರ ನಾಮಕರಣ ಆಚರಣೆ ನಡೆಯುತ್ತಿದೆ.

ಧುಂಡ್ ಆಚರಣೆ

ಈ ದಿನದಂದು ಮಹಿಳೆಯರು ಲಂಬಾಣಿ ಜಾನಪದ ಹಾಡು ಹಾಡುವುದು. ಧರ್ಮ ಗುರುಗಳ ಸಮ್ಮುಖದಲ್ಲಿ ಹೆಸರಿಡುವ ಕಾರ್ಯಕ್ರಮ ನಡೆಯಿತು. ಹೊರಗಡೆ ಪುರುಷರು ಕುಣಿದು ಕುಪ್ಪಳಿಸಿ ಸಂತಸ ಹಂಚಿಕೊಂಡರು. ನಂತರ ಪುರಿ, ಸಜ್ಜ ಮುಂದಿಟ್ಟು ತಾಯಿ ಮಗುವಿನ ಮುಂದೆ ದೊಡ್ಡ ಕೋಲಿಗೆ ಬಡಿಗೆಯಿಂದ ಹೊಡೆಯುವ ಮೂಲಕ ನಾಮಕರಣ ಮಾಡಲಾಯಿತು. ಇದಕ್ಕೆ ಮುಂಚೆ ಹುಣ್ಣಿಮೆ ದಿನ‌ ಬೆಳಗ್ಗೆ ಎದ್ದು ಪುರಿ ಸಜ್ಜಕ ತಯಾರಿಸಿ ದೇವರಿಗೆ ನೈವೇದ್ಯ ಇಟ್ಟು ಇಡೀ ದಿನ ವಿವಿಧ ಮನರಂಜನೆ ಕಾರ್ಯಕ್ರಮ ನಡೆಸುತ್ತಾರೆ.

ಯಾರ ಮನೆಯಲ್ಲಿ ಗುಂಡು ಮಗು ಹುಟ್ಟಿರುತ್ತದೆಯೋ ಆ ಮನೆಯವರು ತಮ್ಮ ಸಮಾಜದ ಪ್ರತಿಯೊಬ್ಬರನ್ನು ನಾಮಕರಣಕ್ಕೆ ಆಹ್ವಾನಿಸುತ್ತಾರೆ. ಗುಳೆ ಹಾಗೂ ಇತರ ಕಾರಣದಿಂದ ಬೇರೆ ಊರಲ್ಲಿದ್ದರೆ, ಹೋಳಿ ಹಬ್ಬಕ್ಕೆ ಕಡ್ಡಾಯವಾಗಿ ಗ್ರಾಮಕ್ಕೆ ಬರಲೇಬೇಕು ಎನ್ನುವ ಸಂಪ್ರದಾಯವಿದೆ. ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ಕಾಮದಹನ, ಹೋಳಿ ಬಣ್ಣ ಆಚರಣೆ, ರಾತ್ರಿ ಜಾಗರಣೆ ಮಾಡುತ್ತಾ ಲಂಬಾಣಿ ಹಾಡಿಗೆ ಮಹಿಳೆಯರು, ಪುರುಷರು ಹೆಜ್ಜೆ ಹಾಕುತ್ತಾರೆ. ಕೊನೆ ದಿನ ನಾಮಕರಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುತ್ತಾರೆ.

ಇದಲ್ಲದೇ ಇವರಲ್ಲಿ ಮೈದುನ ಮತ್ತು ನಾದಿನಿ ಒಬ್ಬರಿಗೊಬ್ಬರು ಬೈದುಕೊಳ್ಳುವ ಸಂಪ್ರದಾಯ ಸಹ ಇದೆ. ಎಲ್ಲ ಕಾರ್ಯಕ್ರಮ ಮುಗಿದ ಮೇಲೆ ಪುರುಷರಿಗೆ ಮಹಿಳೆಯರು ಬಡಿಗೆಯಿಂದ ಹೊಡೆಯುವ ಸಂಪ್ರದಾಯವಿದೆ. ಅದರಿಂದ ತಪ್ಪಿಸಿಕೊಳ್ಳಲು‌ ಪುರುಷರು ಮಹಿಳೆಯರಿಗೆ ಹಣ ನೀಡುತ್ತಾರೆ. ಅಲ್ಲಿಗೆ ಧುಂಡ್ ಆಚರಣೆಗೆ ಕೊನೆ ಹಾಡಲಾಗುತ್ತದೆ. ಈ ಬಾರಿ ಅಲ್ಲಾಪುರ ತಾಂಡಾದಲ್ಲಿ ಒಟ್ಟು 8 ಗಂಡು ಮಗುವಿಗೆ ನಾಮಕರಣ ಮಾಡುವ ಸಂಪ್ರದಾಯ ಆಚರಿಸಲಾಯಿತು.

ಒಟ್ಟಿನಲ್ಲಿ ಜಾತಿಗೊಂದು ಸಂಪ್ರದಾಯವಿರುವ ನಮ್ಮ ದೇಶದಲ್ಲಿ ಇಂತಹ ವಿಶಿಷ್ಟ ಪದ್ಧತಿಗಳು ಗಮನ ಸೆಳೆಯುತ್ತವೆ. ಅದೇ ರೀತಿ ಲಂಬಾಣಿ ಸಮುದಾಯ ತನ್ನದೇ ವೈಶಿಷ್ಟ್ಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿರುವುದು ಅವರ ಸಂಸ್ಕೃತಿಯ ಪ್ರತಿಬಿಂಬ.

ABOUT THE AUTHOR

...view details