ವಿಜಯಪುರ:ಜಿಲ್ಲೆಯ ನಿಡಗುಂದಿ ತಾಲೂಕಿನ ಸುಪ್ರಸಿದ್ಧ ಯಲಗೂರು ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ ಕೆಲ ಭಕ್ತರು ತಮ್ಮ ಕೋರಿಕೆ ಈಡೇರಿಸುವಂತೆ ಬರೆದ ಪತ್ರಗಳು ಗಮನ ಸೆಳೆದವು.
ನಿಡಗುಂದಿ ತಹಶೀಲ್ದಾರ್ ಆದೇಶದ ಮೇರೆಗೆ ಸಿಸಿಟಿವಿ ಕಣ್ಗಾವಲಿನಲ್ಲಿ ದೇವಸ್ಥಾನದ ಮೂರು ಹುಂಡಿಗಳನ್ನು ಏಕಕಾಲದಲ್ಲಿ ಒಡೆಯಲಾಯಿತು. ಹುಂಡಿಯಲ್ಲಿ ಚಿನ್ನ, ಬೆಳ್ಳಿ, ವಿದೇಶಿ ಕರೆನ್ಸಿ, ನಿಷೇಧಿತ ನೋಟುಗಳ ಜೊತೆ ಭಕ್ತರು ಬರೆದ ಪತ್ರಗಳು ಸ್ವಾರಸ್ಯಕರವಾಗಿದ್ದವು.
ಯಲಗೂರು ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ವಿದ್ಯಾರ್ಥಿಯೊಬ್ಬ ಬರೆದ ಪತ್ರ ಆತನ ಮುಗ್ಧತೆಗೆ ಸಾಕ್ಷಿಯಾಗಿತ್ತು. 'ಸರಸ್ವತಿ ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ನನ್ನನ್ನು ಜಾಣನಾಗಿ ಮಾಡಿದರೆ ನಿನ್ನ ದೇವಸ್ಥಾನಕ್ಕೆ ಬರುವೆ' ಎಂದು ಆಂಜನೇಯನಿಗೆ ಪತ್ರ ಬರೆದಿದ್ದಾನೆ. 'ನನ್ನ ಜೀವನದಲ್ಲಿ ಇಲ್ಲಿಯವರೆಗೆ ನನಗೆ ಅಂಟಿಕೊಂಡಿರುವ ದುಶ್ಚಟಗಳಾದ ಕುಡಿತ, ಇಸ್ಪೀಟ್ ಬಿಡುತ್ತಿದ್ದೇನೆ. ದಯವಿಟ್ಟು ದುಶ್ಚಟ ಬಿಡುವ ಶಕ್ತಿ ದಯಪಾಲಿಸು. ನನ್ನ ಮಗನಿಗೆ ಇಷ್ಟಪಟ್ಟ ಕಾಲೇಜು ದೊರೆಯಲಿ' ಎಂದು ತಂದೆವೋರ್ವ ದೇವರಿಗೆ ಬೇಡಿಕೆ ಸಲ್ಲಿಸಿದ್ದಾನೆ.
ತಮ್ಮ ಕಷ್ಟ ಪರಿಹರಿಸುವಂತೆ ಆಂಜನೇಯನಿಗೆ ಬಗೆ ಬಗೆಯಾಗಿ ಪತ್ರ ಬರೆದ ಭಕ್ತರು ಇದರ ಜೊತೆ ನಿರುದ್ಯೋಗಿ ಯುವಕನೊಬ್ಬ 'ನನಗೆ ನೌಕರಿ ಇಲ್ಲ. ಇದರಿಂದ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದೇನೆ. ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದೇನೆ. ಆದರೆ ಯಾವುದು ಫಲ ನೀಡಿಲ್ಲ, ನನಗೆ ಸರ್ಕಾರಿ ನೌಕರಿ ದೊರಕಿಸಿಕೊಟ್ಟರೆ ಮೊದಲು ಎರಡು ತಿಂಗಳ ಸಂಬಳದಿಂದ 50 ಸಾವಿರ ರೂ. ಮೌಲ್ಯದ ಚಿನ್ನವನ್ನು ಹಾಕುತ್ತೇನೆ' ಎಂಬ ಮೂರು ಪುಟದ ಬೇಡಿಕೆ ಮುಂದಿಟ್ಟಿದ್ದಾನೆ.
ಓದಿ:ದಲಿತ ಯುವತಿ ಮೇಲೆ ಅತ್ಯಾಚಾರ, ಹತ್ಯೆ: ಆರ್. ಬಿ. ತಿಮ್ಮಾಪೂರ ಖಂಡನೆ
ಒಟ್ಟು 55 ಸಿಬ್ಬಂದಿ ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದು, ಮೂರು ಹುಂಡಿಗಳಿಂದ ಒಟ್ಟು 44,97,110 ನಗದು ಸಂಗ್ರಹವಾಗಿದೆ. ಜೊತೆಗೆ 240 ಗ್ರಾಂ ಬೆಳ್ಳಿ, 11 ಗ್ರಾಂ ಚಿನ್ನ ದೊರೆತಿದೆ. ಇಲ್ಲಿಯವರೆಗೆ 4 ಬಾರಿ ಹುಂಡಿಯನ್ನು ತೆರೆದು ಹಣ ಎಣಿಕೆ ಮಾಡಿದ್ದು, ಒಟ್ಟು 2 ಕೋಟಿಯಷ್ಟು ಹಣ ಸಂಗ್ರಹವಾಗಿದೆ. ಈ ಹಣವನ್ನು ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯ ನಿರ್ಮಿಸಲು ಉದ್ದೇಶಿಸಲಾಗಿದೆ.