ವಿಜಯಪುರ:ರಾಜ್ಯದಲ್ಲಿ 12,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಬೇಡಿಕೆಯಿದ್ದು, ರಾಜ್ಯ ಸರ್ಕಾರ 35,000 ಮೆಗಾ ವ್ಯಾಟ್ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ರಾಜ್ಯಸರ್ಕಾರ 35,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟಿದೆ: ಗೋವಿಂದ ಕಾರಜೋಳ ಜಿಲ್ಲೆಯ ಚಡಚಣ ಪಟ್ಟಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಪ್ರವಾಸಿ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೀರಾವರಿ ಹಾಗೂ ಹಳ್ಳಿಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವ ದಿಸೆಯಲ್ಲಿ ವಿದ್ಯುತ್ ಯೋಜನೆಗಳಿಗೆ ಸರ್ಕಾರ ವಿಶೇಷ ಗಮನ ನೀಡಿದೆ ಎಂದರು. ಗ್ರೀನ್ ಎನರ್ಜಿ ಕಾರಿಡಾರ್ ಅಡಿಯಲ್ಲಿ 400 ವಿದ್ಯುತ್ ಕೇಂದ್ರಗಳಿಗೆ ಮಂಜೂರಾತಿ ನೀಡಲಿದ್ದು, ಇದರಿಂದ ವಿದ್ಯುತ್ ವ್ಯವಸ್ಥೆ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಚಡಚಣ ನೂತನ ತಾಲೂಕನ್ನಾಗಿ ಘೋಷಿಸಿರುವ ಜೊತೆಗೆ ನಾಗರೀಕರಿಗೆ ವಿವಿಧ ಸೌಲಭ್ಯಗಳು ತಕ್ಷಣ ಲಭ್ಯವಾಗಲು ವಿವಿಧ ಸರ್ಕಾರಿ ಕಚೇರಿಗಳು ಬರಬೇಕಾಗಿವೆ. ಇದಕ್ಕಾಗಿ ಸೂಕ್ತ ಜಾಗವನ್ನು ಸಂಬಂಧಪಟ್ಟ ಅಧಿಕಾರಿಗಳು ಗುರುತಿಸಿದ್ದಲ್ಲಿ ಮಿನಿ ವಿಧಾನಸೌಧ ಅನುದಾನ ಮಂಜೂರಾತಿಗೂ ಪ್ರಯತ್ನಿಸುವುದಾಗಿ ಹೇಳಿದರು.
ಲಿಂಗಸೂರ-ಶಿರಾಡೋಣ ರಸ್ತೆಯನ್ನು 200 ಕಿ.ಮೀ ರಾಜ್ಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವ ಮತ್ತು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದ್ದು, ಕೆಲವೇ ದಿನಗಳಲ್ಲಿ ಇದಕ್ಕೆ ಮಂಜೂರಾತಿ ದೊರೆಯುವ ವಿಶ್ವಾಸವಿದೆ. ಚಡಚಣ ತಾಲೂಕಿನಲ್ಲಿ 2019-20ನೇ ಸಾಲಿನಲ್ಲಿ ರಸ್ತೆ ದುರಸ್ತಿಗಾಗಿ 38 ಕೋಟಿ ರೂ. ಅನುದಾನ ನೀಡಲಾಗಿದೆ. ಅದರಂತೆ ಕೇಂದ್ರ ರಸ್ತೆ ನಿಧಿ ಯೋಜನೆ ಅಡಿಯಲ್ಲಿ ಕಳೆದ 3 ವರ್ಷಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 13 ಕಾಮಗಾರಿಗಳು ಮಂಜೂರಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ 3 ಹೊಸ ರಾಷ್ಟ್ರೀಯ ಹೆದ್ದಾರಿಗಳು ಅನುಮೋದನೆಯಾಗಿವೆ. ರಾಷ್ಟ್ರೀಯ ಹೆದ್ದಾರಿ 548 ಬಿ ಮಹಾರಾಷ್ಟ್ರ ಗಡಿಯಿಂದ ಇಂಡಿ, ವಿಜಯಪುರ, ಅಥಣಿ, ಕಾಗವಾಡ, ಚಿಕ್ಕೋಡಿ ಸಂಕೇಶ್ವರದವರೆಗೆ 270 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿರುತ್ತವೆ. ಮಹಾರಾಷ್ಟ್ರ ಗಡಿಯಿಂದ ಮಾಶ್ಯಾಳ, ಕರಜಿಗಿ , ಮಣ್ಣೂರ, ಅಗರಖೇಡ ಕ್ರಾಸ್, ಇಂಡಿ , ರೂಗಿ, ಅಥರ್ಗಾ, ವಿಜಯಪುರವರೆಗೆ ಅಂದಾಜು ಪ್ರಕ್ರಿಯೆ ತಯಾರಿಸಲು ಟೆಂಡರ್ ಕರೆಯಲಾಗಿದೆ. ವಿಜಯಪುರದಿಂದ ತಿಕೋಟಾ, ಹೊನವಾಡ, ತೆಲಸಂಗ ಕ್ರಾಸ್, ಅಥಣಿ ಮುರಗುಂಡಿವರೆಗೆ 80 ಕಿ.ಮೀ. ಉದ್ದದ ರಸ್ತೆ ಅಂದಾಜು ಪ್ರಕ್ರಿಯೆ ಮಂಜೂರಾತಿ ಹಂತದಲ್ಲಿರುತ್ತದೆ ಎಂದರು.
ಓದಿ:ಕರ್ನಾಟಕದ ಬಳಿಕ ಗುಜರಾತ್ನಲ್ಲಿ ಭೀಕರ ರಸ್ತೆ ಅಪಘಾತ... ಟ್ರಕ್ ಹರಿದು 15 ಕೂಲಿ ಆಳುಗಳು ಬಲಿ!
ರಾಜ್ಯ ಸರ್ಕಾರವು ಒಂದು ವರ್ಷದ ಅವಧಿಯಲ್ಲಿ ನೆರೆ ಮತ್ತು ಪ್ರವಾಹದಿಂದ 60 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ. ಕೊರೊನಾದಿಂದಾಗಿ ರಾಜ್ಯಕ್ಕೆ ಬರಬೇಕಿದ್ದ 70 ಸಾವಿರ ಕೋಟಿ ರೂ. ಆದಾಯ ಕೈತಪ್ಪಿದೆ. ಸರ್ಕಾರ ಅಭಿವೃದ್ಧಿಗೆ ಗಮನ ನೀಡುತ್ತಿದ್ದು, ಮುಂದುವರೆದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಿದೆ ಎಂದು ಡಿಸಿಎಂ ಹೇಳಿದರು.