ಮುದ್ದೇಬಿಹಾಳ:ಸರ್ಕಾರದ ಕೆಲಸಗಳನ್ನು ಮಾಡಿಕೊಡಲು ಲಂಚ ಪಡೆಯುವ ಅಧಿಕಾರಿಗಳನ್ನು ಬಿಡುವುದಿಲ್ಲ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ಲೋಕಾಯುಕ್ತ, ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ತಮ್ಮ ಕೆಲಸಗಳು ಆಗದಿರುವ ಬಗ್ಗೆ, ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಲೋಕಾಯುಕ್ತ ಕಚೇರಿಯ ಗಮನಕ್ಕೆ ಲಿಖಿತ ದೂರು ಸಲ್ಲಿಸಿದರೆ ಅಂಥ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಪುರಸಭೆ ಮುಖ್ಯಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಉಪ ಲೋಕಾಯುಕ್ತರು, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಇಂದಿಗೂ ಅನೈರ್ಮಲ್ಯ ವಾತಾವರಣ ಹೆಚ್ಚಿದೆ. ಶೌಚಾಲಯ ಕಟ್ಟಿಕೊಂಡಿರುವುದಾಗಿ ಹೇಳಿ ಹಣ ದುರುಪಯೋಗ ಮಾಡಿಕೊಂಡಿರುವ ಪ್ರಕರಣಗಳೇ ಹೆಚ್ಚಾಗಿವೆ.
ಈ ನಿಟ್ಟಿನಲ್ಲಿ ಅಂತಹ ಪ್ರಕರಣಗಳಲ್ಲಿ ಭಾಗಿಯಾದ ಪಿಡಿಒ, ಕಾರ್ಯದರ್ಶಿಗಳು ಹಾಗೂ ಫಲಾನುಭವಿಗಳ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಹಾಕಬಾರದು. ಒಂದು ವೇಳೆ ನೀವು ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದರೆ ನಿಮ್ಮ ವಿರುದ್ಧ ಕ್ರಮಕೈಗೊಳ್ಳಲು ಮೇಲಧಿಕಾರಿಗೆ ಸೂಚಿಸಬೇಕಾಗುತ್ತದೆ. ಅವರು ನಿಮ್ಮ ಮೇಲೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ರೆ ಅವರ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಭ್ರಷ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಉಪ ಲೋಕಾಯುಕ್ತ ಪಾಟೀಲ್ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ, ತಾಲೂಕು ಪಂಚಾಯತ್, ಸಿಡಿಪಿಒ, ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್, ಪಿಡಬ್ಲ್ಯೂಡಿ ಮೊದಲಾದ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ಲೋಕಾಯುಕ್ತ ಎಸ್ಪಿ ಯಶೋಧಾ ಒಂಟಗೋಡಿ ಉಪಸ್ಥಿತರಿದ್ದರು.
ಪಡೇಕನೂರ ಸರ್ಕಾರಿ ಶಾಲೆಗೆ ಸೌಲಭ್ಯ ಕಲ್ಪಿಸಲು ಸೂಚನೆ: ಪಡೇಕನೂರ ಗ್ರಾಮದಿಂದ ಆಗಮಿಸಿದ್ದ ಕೆಲ ಗ್ರಾಮಸ್ಥರು ಉಪ ಲೋಕಾಯುಕ್ತರಿಗೆ ಮನವಿ ಸಲ್ಲಿಸಿ, ಗ್ರಾಮದ ಶಾಲೆಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಕುಡಿಯುವ ನೀರು, ಕಾಂಪೌಂಡ್ ಹಾಗೂ ಶೌಚಾಲಯ ನಿರ್ಮಿಸಿ ಕೊಡುವಂತೆ ವಿನಂತಿಸಿದರು. ಕೂಡಲೇ ಸಭೆಯಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ್ ಜೇವರಗಿ ಹಾಗೂ ತಾಪಂ ಇಒ ಶಶಿಕಾಂತ ಶಿವಪೂರೆ ಅವರಿಗೆ, ತ್ವರಿತವಾಗಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಂತೆ ಬಿ.ಎಸ್.ಪಾಟೀಲ್ ಸೂಚಿಸಿದರು.
ಸುಮೊಟೊ ಕೇಸ್ ದಾಖಲು: ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ, ಚರಂಡಿಗಳ ನಿರ್ಮಾಣದ ಕುರಿತು ತಾಲೂಕಾ ಪಂಚಾಯತ್ ವಿರುದ್ದ ಸುಮೊಟೊ ಕೇಸ್ ದಾಖಲಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಅತಿಕ್ರಮಣ ತೆರವಿಗೆ ಮುಲಾಜಿಲ್ಲದೆ ಕ್ರಮ ಜರುಗಿಸಿ : ಪಟ್ಟಣದ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಭಾಗದ ರಸ್ತೆಯ ಬದಿ ಅತಿಕ್ರಮಣ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪುರಸಭೆ ಅಧಿಕಾರಿಗಳಿಗೆ ಉಪ ಲೋಕಾಯುಕ್ತರು ಸೂಚಿಸಿದರು.
ಟ್ರಾಫಿಕ್ ಕಿರಿಕಿರಿ ನಿಯಂತ್ರಿಸಿ : ಪೊಲೀಸ್ ಇಲಾಖೆಯವರು ರಸ್ತೆಯಲ್ಲಿಯೇ ಅತಿಕ್ರಮಣ ಕಂಡರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ. ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.