ವಿಜಯಪುರ: ಗುಮ್ಮಟನಗರಿಯ ವಿಜಯಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ರಸ್ತೆಯಲ್ಲಿ ಕೊರೊನಾ ಭಯದಿಂದ 8 ತಿಂಗಳ ಕಾಲ ಮನೆಯಲ್ಲಿದ್ದ ಜಿಲ್ಲೆಯ ಜನತೆಯಲ್ಲೀಗ ಕೊರೊನಾ ಆತಂಕ ಕಡಿಮೆಯಾಗಿದ್ದು, ಭರ್ಜರಿಯಾಗಿ ಹಬ್ಬದ ಆಚರಣೆಗೆ ಮುಂದಾಗಿದ್ದಾರೆ.
ವಿಜಯಪುರದಲ್ಲಿ ಬೆಳಕಿನ ಹಬ್ಬದ ಖರೀದಿ ಬಲು ಜೋರು
ಕೊರೊನಾ ವೈರಸ್ ಎಲ್ಲ ಹಬ್ಬಗಳಿಗೂ ಕೊಕ್ಕೆ ಹಾಕಿ, ಜನರು ಮನೆಯಲ್ಲಿ ಉಳಿಯುವಂತಾಗಿತ್ತು. ಸಾರ್ವಜನಿಕರಲ್ಲಿ ಇತ್ತೀಚಿನ ದಿನಗಳಲ್ಲಿ ವೈರಸ್ ಭಯ ದೂರವಾಗುತ್ತಿದ್ದಂತೆ ಹಬ್ಬದ ಖರೀದಿಗೆ ಮುಗಿ ಬಿದ್ದಿದ್ದಾರೆ.
ಸದ್ಯ ನಗರದ ಯಾವುದೇ ಮೂಲೆಗಳಿಗೆ ಹೋದರೂ ಚಂಡು ಹೂವು, ನಕ್ಷತ್ರ ಬುಟ್ಟಿ, ಮಣ್ಣಿನಿಂದ ತಯಾರಿಸಿದ ಹಣತೆಗಳು ಕಾಣಸಿಗುತ್ತವೆ. ಈ ವರ್ಷದ ದೀಪಾವಳಿ ಹಬ್ಬ ನಗರದ ಜನತೆಗೆ ದುಬಾರಿಯ ಬೆಲೆ ಶಾಕ್ ನೀಡಿದೆ. ಹೌದು.. ಉತ್ತರ ಕರ್ನಾಟಕದಲ್ಲಿ ಬಂದ ನೆರೆ ಪರಿಣಾಮವಾಗಿ ಹಬ್ಬಕ್ಕೆ ಬೇಕಾದ ಎಲ್ಲ ಸಾಮಗ್ರಿಗಳ ಬೆಲೆಯಲ್ಲಿ ಕಳೆದ ವರ್ಷಕ್ಕಿಂತ ಬೆಲೆ ಏರಿಕೆ ಕಂಡಿದೆ. ಹೀಗಾಗಿ ಇಲ್ಲಿನ ಜನ ಯಾವುದೇ ಸಾಮಗ್ರಿಗಳನ್ನು ಖರೀದಿಸಲು ಹಿಂದೂ ಮುಂದೂ ನೋಡುವಂತಾಗಿದೆ. ಅಲ್ಲದೆ ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬ ಬಿಡಲಾಗುವುದಿಲ್ಲ. ಹಾಗಾಗಿ ಸಾಮಗ್ರಿಗಳು ಎಷ್ಟೇ ದುಬಾರಿಯಾದರೂ ಖರೀದಿಸಬೇಕಾದ ಅನಿವಾರ್ಯ ಗುಮ್ಮಟ ನಗರಿ ಜನತೆಯ ಕಳವಳಕ್ಕೆ ಕಾರಣವಾಗಿದೆ.
ಇನ್ನೂ ಮಾರುಕಟ್ಟೆಯಲ್ಲಿ ಹೊರ ರಾಜ್ಯಗಳಿಂದ ಆಮದು ಮಾಡಿಕೊಂಡ ಹಣತೆ ಹೆಚ್ಚಾಗಿ ಕಾಣಸಿಗುತ್ತಿವೆ. ಸ್ಥಳೀಯ ಕುಂಬಾರರು ತಯಾರಿಸಿದ ಹಣತೆಯನ್ನು ಜನ ಖರೀದಿಸಲು ಮುಂದೆ ಬರುತ್ತಿಲ್ಲ. ಇತ್ತ ಮಾರುಕಟ್ಟೆಯಲ್ಲಿ ತರಹೇವಾರಿ ಹೂವುಗಳು, ದೇವಿ ಪೂಜಾ ಸಾಮಗ್ರಿಗಳ ಬೆಲೆ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ದುಬಾರಿಯಾಗಿದೆ. ಅಲ್ಲದೆ 20 ರೂ. ಗಳಿಂದ ಸಿಗುತ್ತಿದ್ದ ಹೂವಿನ ಮಾಲೆ ದರ ಸದ್ಯ 150 ರೂ ಗಳ ಗಡಿ ತಲುಪಿದೆ. ಬದನೆಕಾಯಿ, ಕುಂಬಳಕಾಯಿ ಸೇರಿದಂತೆ ತರಕಾರಿ ಬೆಲೆ ಗಗನಕ್ಕೇರಿದೆ. ಸರ್ಕಾರ ಪಟಾಕಿ ನಿಷೇಧ ಮಾಡಿದ ಹಿನ್ನೆಲೆ, ಮಾರುಕಟ್ಟೆಯಲ್ಲಿ ಪಟಾಕಿ ಅಂಗಡಿಗಳೇ ಮಾಯವಾಗಿವೆ.