ವಿಜಯಪುರ: ಕೊರೊನಾ ವೈರಸ್ ಭಯ ತೊರೆದು ರಕ್ತ ದಾನಿಗಳು ರಕ್ತ ನೀಡಲು ಮುಂದಾಗಿದ್ದರೂ ಸಹ ನಿರೀಕ್ಷಿತ ಪ್ರಮಾಣದ ರಕ್ತ ಶೇಖರಣೆಯಾಗುತ್ತಿಲ್ಲ. ಇದು ತುರ್ತು ಚಿಕಿತ್ಸೆ ರೋಗಿಗಳ ಚಿಕಿತ್ಸೆ ಮೇಲೆ ಪ್ರಭಾವ ಬೀರಿದೆ.
ಕೊರೊನಾ ಮಹಾಮಾರಿ ಉದ್ಯೋಗ, ಕೈಗಾರಿಕೆ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರವನ್ನು ಸರ್ವನಾಶ ಮಾಡಿತ್ತು. ಇದರಲ್ಲಿ ವೈದ್ಯಕೀಯ ಕ್ಷೇತ್ರವೂ ಸೇರಿದೆ. ರಕ್ತ ಕಡಿಮೆ ಇರುವವರಿಗೆ ಕೊರೊನಾ ಬೇಗನೇ ಬರುತ್ತದೆ ಎನ್ನುವ ವದಂತಿಗಳು ಕಳೆದ ಐದು ತಿಂಗಳಿಂದ ಹರಡಿದ ಮೇಲೆ ಹಾಗೂ ಲಾಕ್ಡೌನ್ನಿಂದ ರಕ್ತದಾನ ಶಿಬಿರಗಳು ಸ್ಥಗಿತಗೊಂಡಿದ್ದವು. ಅದರ ಜೊತೆ ಕೊರೊನಾ ಭೀತಿಯಿಂದ ರಕ್ತದಾನಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು. ಈಗ ಲಾಕ್ಡೌನ್ ತೆರವಾಗಿದೆ. ರಕ್ತ ಶೇಖರಣೆ ಮಾಡಲು ವಿವಿಧೆಡೆ ಶಿಬಿರ ಆಯೋಜಿಸಲಾಗುತ್ತಿದ್ದರೂ ಸಹ ರಕ್ತದಾನಿಗಳು ಮಾತ್ರ ಬರುತ್ತಿಲ್ಲ. ಶಾಲೆ, ಕಾಲೇಜ್ಗಳು ಸಹ ಬಂದ್ ಇರುವ ಕಾರಣ ವಿದ್ಯಾರ್ಥಿಗಳು ರಕ್ತದಾನ ಮಾಡಲು ಬರುತ್ತಿಲ್ಲ ಎಂದು ಖಾಸಗಿ ರಕ್ತ ಭಂಡಾರ ಆಯೋಜಕರು ತಿಳಿಸಿದರು.
ಕೊರೊನಾ ಭೀತಿಯಿಂದ ರಕ್ತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ವಿಜಯಪುರ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿಯೂ ಸಹ ರಕ್ತ ಶೇಖರಣೆ ಕಡಿಮೆಯಾಗಿದೆ. ಕೊರೊನಾ ಬರುವ ಮುನ್ನ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಲವು ಸಂಘ ಸಂಸ್ಥೆಗಳು ರಕ್ತದಾನ ಮಾಡುವವರ ಹೆಸರು ಇರುವ ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡಿರುವವರ ಮಾಹಿತಿ ಸಂಗ್ರಹಿಸಿ ರಕ್ತದಾನಕ್ಕೆ ವ್ಯವಸ್ಥೆ ಮಾಡುತ್ತಿದ್ದವು. ಈಗ ಜಿಲ್ಲಾಸ್ಪತ್ರೆ ಸಹ ಇದೇ ದಾರಿ ತುಳಿದಿದೆ. ತುರ್ತಾಗಿ ರಕ್ತದ ಅವಶ್ಯಕತೆ ಇದ್ದಲ್ಲಿ ಫೋನ್ ಮೂಲಕ ಕರೆಯಿಸಿ ಇಲ್ಲಿನ ಸಿಬ್ಬಂದಿ ರಕ್ತ ಪಡೆದುಕೊಳ್ಳುತ್ತಿದ್ದಾರೆ. ಆದರೆ ರಕ್ತದಾನ ಮಾಡಲು ಮಾತ್ರ ದಾನಿಗಳು ಹಿಂಜರಿಯುತ್ತಿದ್ದಾರೆ.
ಇದನ್ನು ಸರ್ಕಾರದ ರಕ್ತನಿಧಿ ಸಂಗ್ರಹ ಅಧಿಕಾರಿಗಳು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಸದ್ಯ ರಕ್ತ ಶೇಖರಣೆ ಹೆಚ್ಚಿಸಲು, ಹಳ್ಳಿ-ಹಳ್ಳಿಗಳಿಗೆ ಹೋಗಲು ಸುಸಜ್ಜಿತ ವಾಹನ ಖರೀದಿಸಲಾಗಿದೆ. ಇದರಲ್ಲಿ ರಕ್ತ ಪಡೆದುಕೊಳ್ಳುವುದು, ಅದನ್ನು ಶೇಖರಣೆ ಮಾಡುವುದು, ಅಲ್ಲಿ ರಕ್ತದ ಮಾದರಿ ಪರೀಕ್ಷೆಯ ವ್ಯವಸ್ಥೆ ಮಾಡಿಕೊಂಡಿದೆ. ಈ ಮೂಲಕ ರಕ್ತದಾನಿಗಳಿಗೆ ಕೊರೊನಾಗೆ ರಕ್ತದಾನ ಮಾಡುವುದಕ್ಕೆ ಯಾವುದೇ ಸಂಬಂಧವಿಲ್ಲವೆಂದು ತಿಳಿ ಹೇಳಿ ರಕ್ತ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಸದ್ಯ ರಕ್ತದ ಕೊರತೆ ಇಲ್ಲ ಎನ್ನುತ್ತಿರುವ ರಕ್ತನಿಧಿ ಕೇಂದ್ರದ ಅಧಿಕಾರಿಗಳು ವಿವಿಧ ಮಾದರಿಯ 100-120 ಯೂನಿಟ್ ಬ್ಲಡ್ ಸಂಗ್ರಹಿಸಿಟ್ಟಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರಿ ರಕ್ತಭಂಡಾರ ಹೊರತುಪಡಿಸಿ 7, ರಕ್ತ ಭಂಡಾರಗಳಿವೆ. ಅಲ್ಲಿಯೂ ಸಹ ಕೊರೊನಾ ಭಯದಿಂದ ರಕ್ತ ಶೇಖರಣೆ ಕಡಿಮೆಯಾಗುತ್ತಿದೆ. ಇದನ್ನು ಸರಿದೂಗಿಸಲು ಮೊದಲು ಜಾಗೃತಿ ಶಿಬಿರಗಳನ್ನು ಆಯೋಜಿಸಿ ರಕ್ತ ಕೊರತೆಯಿಂದ ಕೊರೊನಾ ಪಾಸಿಟಿವ್ ಬರುವುದಿಲ್ಲ ಎನ್ನುವ ಮಾಹಿತಿ ನೀಡಲು ಸರ್ಕಾರ ಅರಿವು ಮೂಡಿಸಬೇಕಿದೆ. ಆಗ ಮಾತ್ರ ಮತ್ತೆ ರಕ್ತದಾನಿಗಳ ಸಂಖ್ಯೆ ಹೆಚ್ಚಿಸಿ ರಕ್ತದ ಕೊರತೆ ಇರುವ ರೋಗಿಗಳ ನೋವಿಗೆ ಸ್ಪಂದಿಸಬೇಕಿದೆ.