ಮುದ್ದೇಬಿಹಾಳ: ಕೋಳೂರ ತಾಂಡಾದಲ್ಲಿ 27 ಎಕರೆ ಜಮೀನಿನಲ್ಲಿ 2 ಎಕರೆ ಜಮೀನು ಸ್ಮಶಾನಕ್ಕೆಂದು ಮೀಸಲಿಡಲಾಗಿದ್ದು, ಅದರ ಅಭಿವೃದ್ಧಿಗಾಗಿ 11.80 ಲಕ್ಷ ರೂ. ಅನುದಾನ ಬಂದಿದೆ. ಆದರೆ ಆ ಅನುದಾನ ಎಲ್ಲಿ ನಾಪತ್ತೆ ಆಗಿದೆ ಎಂಬುದು ಗೊತ್ತಾಗುತ್ತಿಲ್ಲ. ತಾಂಡಾದಲ್ಲಿರುವ 25 ಎಕರೆ ಜಮೀನಿನಲ್ಲಿ ಅತಿಕ್ರಮಣವಾಗಿದ್ದು ಜಾಗೆಯ ಮಾಲೀಕತ್ವದ ಬಗ್ಗೆ ಹೊಡೆದಾಟ ನಡೆಯುತ್ತಿವೆ. ಅದಕ್ಕೆ ಮುಂದಿನ ದಿನಗಳಲ್ಲಿ ತಾಲೂಕಾಡಳಿತ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ತಾಪಂ ಸದಸ್ಯ ಪ್ರೇಮಸಿಂಗ ಚವ್ಹಾಣ, ತಹಶೀಲ್ದಾರ್‌ಗೆ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಕೂಡಲೇ ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಸರ್ಕಾರಿ ಜಾಗವನ್ನು ಸರ್ವೇ ನಡೆಸಿ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಪತಿಯರಿಗೂ ಅವಕಾಶ:ಅಧ್ಯಕ್ಷರ ಅಪ್ಪಣೆ ಮೇರೆಗೆ ನಡೆದ ಚರ್ಚೆ ವೇಳೆ ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್ ಅವರ ಪತಿ ಪವಾಡೆಪ್ಪಗೌಡ ಹವಾಲ್ದಾರ್ ಹಾಗೂ ಸದಸ್ಯೆ ಚಂದ್ರಕಲಾ ಲೊಟಗೇರಿ ಅವರ ಪತಿ ಎಸ್.ಎಚ್.ಲೊಟಗೇರಿ ಅವರಿಗೂ ಚರ್ಚೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದು ಅಚ್ಚರಿ ಮೂಡಿಸಿತು. ಪ್ರಮುಖ ನಿರ್ಧಾರಗಳನ್ನು ತಾ.ಪಂ ಇಓ ಶಿವಪೂರೆ ಅವರು ಸದಸ್ಯೆಯರ ಗಂಡಂದಿರಿಂದ ಸಲಹೆಗಳನ್ನು ಕೇಳಿದ್ದು ಕಂಡುಬಂತು.
ತಾ.ಪಂ ಇಓ ಶಶಿಕಾಂತ ಶಿವಪೂರೆ ಅವರು ಮಾತನಾಡಿ, ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಮುಂದೆ ಇರುವ ತಾ.ಪಂ ಮಳಿಗೆಗಳನ್ನು ತೆರವುಗೊಳಿಸಿ ಹೊಸ ಮಳಿಗೆಗಳನ್ನು ನಿರ್ಮಿಸಲು ಸರ್ವಾನುಮತದ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಪಿಡಬ್ಲೂಡಿ ಇಲಾಖೆಯಿಂದ ಮಳಿಗೆಗಳ ಬಗ್ಗೆ ವರದಿ ಬಂದಿದ್ದು, ಮಳಿಗೆಗಳು ಸೋರುತ್ತಿವೆ. ಗೋಡೆಗಳು ಬಿರುಕು ಬಿಟ್ಟಿದ್ದು, ಅವು ಬಾಡಿಗೆ ಕೊಡುವ ಸ್ಥಿತಿಯಲ್ಲಿಲ್ಲ. ಅವುಗಳನ್ನು ನೆಲಸಮಗೊಳಿಸಬೇಕು ಎಂದು ಹೇಳಲಾಗಿದ್ದು ಅದರಂತೆ ನ್ಯಾಯಾಲಯದಲ್ಲಿ ಕೇವಿಯೆಟ್ ಹಾಕಿ ಮೂಲ ಮಳಿಗೆದಾರರಿಗೆ ನೋಟಿಸ್ ನೀಡಲಾಗುತ್ತದೆ. ಬಳಿಕ ಮಳಿಗೆಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.
ತಂಗಡಗಿ ತಾಪಂ ಸದಸ್ಯ ಶ್ರೀಶೈಲ ಮರೋಳ ಮಾತನಾಡಿ, ಕಳೆದ ವರ್ಷ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ.ಪರಿಹಾರ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಕೆಲವರಿಗೆ ಸರಿಯಾಗಿ ಪರಿಹಾರದ ಹಣ ಕೊಟ್ಟಿಲ್ಲ ಎಂದು ದೂರಿದರು. ತಹಶೀಲ್ದಾರ್ ಜಿ.ಎಸ್.ಮಳಗಿ, ಕೆಲವು ಊರಿನಲ್ಲಿ ಜಿಪಿಎಸ್ ಸಮಸ್ಯೆಯಿಂದ ಪರಿಹಾರದ ಹಣ ಬಂದಿರಲಿಲ್ಲ. ಅದನ್ನು ಸರಿಪಡಿಸಿ ಪರಿಹಾರ ಧನ ಬರುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ಆರ್.ಡಬ್ಯ್ಲೂ.ಎಸ್ ಇಲಾಖೆಯ ಅಧಿಕಾರಿ ಜೆ.ಪಿ.ಶೆಟ್ಟಿ ಮಾತನಾಡಿ, ಜಲಜೀವನ್ ಮಿಷನ್ ಅಡಿ 2020-21ರ ಸಾಲಿನಲ್ಲಿ ತಾಲೂಕಿಗೆ 21.6 ಕೋಟಿ ರೂ.ಮಂಜೂರಾತಿಗಾಗಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಥಮ ಆದ್ಯತೆ ಮೇರೆಗೆ ಹೆಚ್ಚಿನ ನೀರಿನ ಲಭ್ಯತೆ ಇರುವ ಕ್ಷೇತ್ರಗಳಾದ ಯರಝರಿ, ಕುಂಟೋಜಿ, ಆಲೂರ, ನಾಗಬೇನಾಳ, ಹಿರೇಮುರಾಳ, ರಕ್ಕಸಗಿ ಹಾಗೂ ಇಂಗಳಗೇರಿ ತಾಪಂ ವ್ಯಾಪ್ತಿಯಲ್ಲಿ 69 ಹಳ್ಳಿಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಲಕ್ಷ್ಮೀಬಾಯಿ ಹವಾಲ್ದಾರ್, ಉಪಾಧ್ಯಕ್ಷ ಮಂಜುನಾಥ ಗೌಡ ಪಾಟೀಲ, ಸದಸ್ಯರಾದ ಸುರೇಶ ಹುಗ್ಗಿ, ಲಕ್ಷ್ಮೀಬಾಯಿ ಲಮಾಣಿ, ಚಂದ್ರಕಲಾ ಲೊಟಗೇರಿ, ಪಾರ್ವತಿ ಗುಡಿಮನಿ, ಕಸ್ತೂರಿ ಗುಳಬಾಳ, ಶಿವನಗೌಡ ಮುದ್ದೇಬಿಹಾಳ ಇದ್ದರು.