ವಿಜಯಪುರ:ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಕಳೆದ ಒಂದೂವರೆ ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆದರೆ, ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ. ಈಗ ಕೊನೆ ಬಾರಿ ಏಪ್ರಿಲ್ 14ರವರೆಗೆ ಗಡುವು ನೀಡಿದ್ದೇವೆ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀಗಳು ಎಚ್ಚರಿಕೆ ನೀಡಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಏಪ್ರಿಲ್ 14ರೊಳಗಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದರೆ ಏ. 20ರಂದು ಕೂಡಲಸಂಗಮದಲ್ಲಿ ಅಭಿನಂದನೆ ಸಲ್ಲಿಸಲಾಗುವುದು. ನೀಡದಿದ್ದರೆ ಮತ್ತೆ ತಾರ್ಕಿಕ ಅಂತ್ಯಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಈಗಾಗಲೇ ಎರಡು ಬಾರಿ ಸರ್ಕಾರಕ್ಕೆ ಗಡುವು ನೀಡಲಾಗಿತ್ತು. ಆದರೆ, ಸರಿಯಾಗಿ ಸ್ಪಂದಿಸಿಲ್ಲ. ಈಗ ಮತ್ತೊಮ್ಮೆ ಮಾತುಕತೆ ನಡೆಸಿದ್ದು, ಸರ್ಕಾರ ಹಾಗೂ ವಿರೋಧ ಪಕ್ಷಗಳು ಸಕಾರಾತ್ಮಕ ಸ್ಪಂದನೆ ನೀಡಿವೆ. ಹೀಗಾಗಿ, ಈ ಬಾರಿ ಮೀಸಲಾತಿ ದೊರೆಯಬಹುದು ಎಂದು ಆಶಾಭಾವನೆ ಹೊಂದಿದ್ದೇವೆ ಎಂದರು.