ವಿಜಯಪುರ:ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ಆಲಮಟ್ಟಿ ಜಲಾಶಯದ ಒಳಹರಿವು ಕಡಿಮೆಯಾಗಿದ್ದು, ಜಲಾಶಯದ ಹೊರಹರಿವು ಹೆಚ್ಚಳ ಮಾಡಲಾಗಿದೆ.
ಆಲಮಟ್ಟಿ ಜಲಾಶಯದದಿಂದ ಕ್ರಮ ಪ್ರಕಾರ ನೀರು ಹರಿಸುವಂತೆ ಡಿಸಿಎಂ ಕಾರಜೋಳ ಸೂಚನೆ ಆಲಮಟ್ಟಿ ಜಲಾಶಯದಲ್ಲಿ ನೀರಿನ ಒಳಹರಿವು ಮಂಗಳವಾರ 41,512 ಕ್ಯೂಸೆಕ್, ಬುಧವಾರ 27,658 ಕ್ಯೂಸೆಕ್ ಇತ್ತು. ಸದ್ಯ ಜಲಾಶಯದಲ್ಲಿ 92.46 ಟಿಎಂಸಿ ನೀರು ಸಂಗ್ರಹವಾಗಿದೆ.
ಇನ್ನೂ ಹೊರಹರಿವಿನ ಪ್ರಮಾಣ ಹೆಚ್ಚಿಸಲಾಗಿದ್ದು, 46130 ಕ್ಯೂಸೆಕ್ ನೀರು ನಿತ್ಯ ಹೊರ ಬಿಡಲಾಗುತ್ತಿದೆ. ಮಂಗಳವಾರ ಜಲಾಶಯದ ನೀರಿನ ಮಟ್ಟ 517.62 ಮೀಟರ್ ದಾಖಲಾಗಿದೆ. ಬುಧವಾರ ಮತ್ತೆ ಒಳಹರಿವು ತಗ್ಗಿದೆ. ಸದ್ಯ 517.50 ಮೀಟರ್ ದಾಖಲಾಗಿದೆ.
ನೀರು ಹರಿಸಿ:
ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ರೈತರ ಅನುಕೂಲಕ್ಕಾಗಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಕಾಲುವೆಗಳಿಗೆ ಜುಲೈ 21ರಿಂದ ನೀರು ಹರಿಸಲು ಆರಂಭಿಸಬೇಕು. ಜೊತೆಗೆ ಕಾಲುವೆಯ ಕಾಮಗಾರಿಯನ್ನು ಜು.20 ರೊಳಗಾಗಿ ಪೂರ್ಣಗೊಳಿಸಬೇಕು ಎಂದು ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ. ಆಲಮಟ್ಟಿ ಜಲಾಶಯದ ಒಳಹರಿವು ಸ್ಥಗಿತವಾಗುವವರೆಗೆ ಕಾಲುವೆಗಳಿಗೆ ನೀರು ಹರಿಸಬೇಕೆಂದು ಸೂಚನೆ ನೀಡಿದ್ದಾರೆ.
ಒಳಹರಿವು ಸ್ಥಗಿತವಾದ ನಂತರ ಹಿಂಗಾರು ಹಂಗಾಮಿಗೆ ನಾರಾಯಣಪುರ ಜಲಾಶಯದ ಕಾಲುವೆಗಳಿಂದ ಸರದಿ ಪ್ರಕಾರ 14 ದಿನ ಬಿಟ್ಟು, ಇನ್ನು 8 ದಿನ ಬಂದ್ ಮಾಡಬೇಕು. ಅದೇ ರೀತಿ ಆಲಮಟ್ಟಿ ಜಲಾಶಯದಿಂದ ಕಾಲುವೆಗಳಿಗೆ 8 ದಿನ ನೀರು ಹರಿಸಿ 7 ದಿನ ಬಂದ್ ಮಾಡಬೇಕು. ಈ ಪದ್ದತಿಯನ್ನು ಚಾಚು ತಪ್ಪದೇ ಪಾಲಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಕಾರಜೋಳ ತಿಳಿಸಿದ್ದಾರೆ.
ಆಲಮಟ್ಟಿಗೆ ಡಿಸಿ ಭೇಟಿ:
ಆಲಮಟ್ಟಿ ಜಲಾಶಯಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಅನುಪಮ ಅಗರವಾಲ್ ಭೇಟಿ ನೀಡಿದರು. ಈ ವೇಳೆ ನಿಡಗುಂದಿ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಹಸೀಲ್ದಾರ್ಗಳ ಜತೆ ಮಾತುಕತೆ ನಡೆಸಿದರು. ನಂತರ ಮಾತನಾಡಿದ ಅವರು, ಕೃಷ್ಣಾ ನದಿಯ ಸದ್ಯದ ಒಳಹರಿವು ಗಮನಿಸಿದರೆ ಪ್ರವಾಹ ಉಂಟಾಗುವ ಸಾಧ್ಯತೆಗಳು ಕಡಿಮೆ ಇದೆ. ನದಿ ತೀರದಲ್ಲಿ ಬರುವ ನಿಡಗುಂದಿ, ಮುದ್ದೇಬಿಹಾಳ ತಾಲೂಕಿನ 18 ಹಳ್ಳಿಗಳ ಜನರಿಗೆ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಸಮಸ್ಯೆ ಕುರಿತು ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಎಂದರು.