ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊರೊನಾದಿಂದ ಸಂಕಷ್ಟಕ್ಕೀಡಾದ ಜನರಿಗೆ ಸಹಾಯವಾಗಲೆಂದು 2,300 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ದೇಶದ ಯಾವುದೇ ರಾಜ್ಯಗಳು ನೀಡದೇ ಇರುವ ಪ್ಯಾಕೇಜ್‍ಅನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ನೂತನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಒಳಗಾದ ರಸ್ತೆ ಬದಿ ವ್ಯಾಪಾರಸ್ಥರು, ಕ್ಷೌರಿಕರು, ಅಗಸರು, ಟ್ಯಾಕ್ಸಿ ಹಾಗೂ ಆಟೋ ಚಾಲಕರು ಮತ್ತು ಚರ್ಮೋದ್ಯೋಗ ಮಾಡುವ 11,770 ಜನರಿಗೆ ಪ್ರತಿ ಕುಟುಂಬಕ್ಕೆ 5 ಸಾವಿರ ರೂ.ಗಳಂತೆ ಪರಿಹಾರ ನೀಡಲಾಗಿದೆ ಎಂದರು.
ಕಳೆದೆರಡು ತಿಂಗಳ ರೇಷನ್ ನೀಡಲಾಗಿದ್ದರೂ ಕೂಡ ಉದ್ಯೋಗವಿಲ್ಲದೆ ಸಂಕಷ್ಟಕ್ಕೀಡಾಗಿರುವ ಕಾರಣ ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಒಟ್ಟು 7 ಲಕ್ಷದ 75 ಸಾವಿರ, 2 ಲಕ್ಷ 90 ಸಾವಿರ ಕ್ಷೌರಿಕರಿಗೆ ಹಾಗೂ 60 ಸಾವಿರ ಅಗಸರಿಗೆ ಕೊಡಲಾಗಿದೆ ಎಂದರು. ಹಣ್ಣು, ತರಕಾರಿ ಬೆಳೆಯುವ ರೈತರಿಗೆ ತಲಾ 15 ಸಾವಿರ ರೂ. ಕೊಡಲಾಗಿದೆ. ವಿಜಯಪುರ ಒಂದರಲ್ಲೇ ರಸ್ತೆ ಬದಿ ಕಾರ್ಯನಿರ್ವಹಿಸುವ 438 ಚಮ್ಮಾರರಿಗೆ ತಲಾ 5,000 ರೂ. ಪರಿಹಾರ ನೀಡಲಾಗಿದೆ ಎಂದರು.