ವಿಜಯಪುರ:ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಜನವರಿ 11ರಂದು ಡಿಸಿಸಿ ಬ್ಯಾಂಕ್ ಇಂಡಿ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜರುಗಲಿದ್ದು, ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ನೂತನ ಕಟ್ಟಡ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯಲ್ಲಿರುವ ಡಿಸಿಸಿ ಬ್ಯಾಂಕ್ ನೂತನ ಕಟ್ಟಡದ ಆವರಣದಲ್ಲಿಯೇ ಉದ್ಘಾಟನಾ ಸಮಾರಂಭ ಜರುಗಲಿದ್ದು, ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು, ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಸ್ವಾಮಿಗಳು, ಗೊಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಸಹಕಾರ ಮಹಾಮಂಡಳದ ಅಧ್ಯಕ್ಷ ಕೆ.ಎನ್.ರಾಜಣ್ಣ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಡಾ. ದೇವಾನಂದ ಚವ್ಹಾಣ, ಜಿ.ಪಂ. ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಸೇರಿದಂತೆ ಅನೇಕ ಗಣ್ಯರು, ರೈತರು, ಸಹಕಾರ ಸಂಘಗಳ ಧುರೀಣರು ಪಾಲ್ಗೊಳ್ಳಲಿದ್ದಾರೆ ಎಂದರು.
ಜನವರಿ 11ರಂದು ಡಿಸಿಸಿ ಬ್ಯಾಂಕ್ ಇಂಡಿ ಶಾಖೆಯ ನೂತನ ಕಟ್ಟಡ ಉದ್ಘಾಟನೆ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ 50 ಹೊಸ ಶಾಖೆಗಳನ್ನು ಆರಂಭಿಸುವ ಸಂಕಲ್ಪ ಮಾಡಲಾಗಿತ್ತು. ಈಗಾಗಲೇ 39 ಶಾಖೆಗಳನ್ನು ಆರಂಭಿಸಲಾಗಿದೆ. ಇನ್ನುಳಿದ 11 ಶಾಖೆಗಳು ಉದ್ಘಾಟನೆಗೊಂಡರೆ 50 ಶಾಖೆಗಳ ಸಂಕಲ್ಪ ಪೂರ್ಣಗೊಂಡು ಡಿಸಿಸಿ ಬ್ಯಾಂಕ್ ಕೀರ್ತಿ ಮತ್ತಷ್ಟು ಹೆಚ್ಚಲಿದೆ ಎಂದರು.
ರಾಜ್ಯಮಟ್ಟದ ಸಹಕಾರಿ ಸಪ್ತಾಹ:
ಶತಮಾನೋತ್ಸವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿಯೇ ರಾಜ್ಯಮಟ್ಟದ ಸಹಕಾರಿ ಸಪ್ತಾಹವನ್ನು ಆಚರಿಸುವ ಆಶಯ ಹೊಂದಲಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಸಹಕಾರಿ ಯೂನಿಯನ್ ಅಧ್ಯಕ್ಷರಿಗೆ, ಸಹಕಾರ ಮಂಡಳದ ಅಧ್ಯಕ್ಷರಿಗೆ ಪತ್ರ ವ್ಯವಹಾರ ಮಾಡಲಾಗಿದೆ. ನವೆಂಬರ್ನಲ್ಲಿ ಈ ಸಪ್ತಾಹ ಆಯೋಜನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ದುಡಿಯುವ ಬಂಡವಾಳ 3 ಸಾವಿರ ಕೋಟಿ ರೂ. ದಾಟಿದ್ದು, 2019-20ರ ಡಿಸೆಂಬರ್ ಮಾಸಾಂತ್ಯಕ್ಕೆ ದುಡಿಯುವ ಬಂಡವಾಳ 3022 ಕೋಟಿ ರೂ.ಗಳಷ್ಟಾಗಲಿದೆ. ಇದು ಬ್ಯಾಂಕಿನ ಸಾರ್ವಕಾಲಿಕ ದಾಖಲೆಯಾಗಿದೆ ಎಂದರು.