ವಿಜಯಪುರ:ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯಲ್ಲೂ ಹೋಮ್ ಕ್ವಾರಂಟೈನ್ ಹಾಗೂ ಹೋಮ್ ಐಸೋಲೇಷನ್ ನಿಯಮಗಳ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂಡಿ ಉಪವಿಭಾಗದ ತಹಶೀಲ್ದಾರರು, ತಾಲೂಕಾ ಆರೋಗ್ಯಾಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಕೋವಿಡ್-19 ನಿಯಂತ್ರಣ ಕುರಿತಂತೆ ಸಭೆ ನಡೆಸಿ ಅವರು ಮಾತನಾಡಿದರು.
ಕೋವಿಡ್ ನಿಯಂತ್ರಣಕ್ಕಾಗಿ ಯಾವುದೇ ರೀತಿಯ ಹೋಮ್ ಕ್ವಾರಂಟೈನ್ ಮತ್ತು ಹೋಮ್ ಐಸೋಲೇಷನ್ ನಿಯಮಗಳು ಮತ್ತು ಸರ್ಕಾರದ ನಿರ್ದೇಶನಗಳು ಉಲ್ಲಂಘನೆಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಒಂದು ವೇಳೆ ಉಲ್ಲಂಘನೆಯಾದಲ್ಲಿ ತಕ್ಷಣ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದರು.
ಕೋವಿಡ್‌ನ್ನು ನಿಯಂತ್ರಿಸಲು ಹೆಚ್ಚು ಹೆಚ್ಚು ಸ್ವ್ಯಾಬ್ ಸಂಗ್ರಹವನ್ನು ಮಾಡಲು ಕ್ರಮ ಕೈಗೊಳ್ಳಬೇಕು. ಸೋಂಕಿತರೊಂದಿಗೆ ಸಂಪರ್ಕಗಳನ್ನು ಪರಿಣಾಮಕಾರಿಯಾಗಿ ಪತ್ತೆ ಹಚ್ಚಬೇಕು. ಹೋಮ್ ಕ್ವಾರಂಟೈನ್ ವಾಚ್ ಹಾಗೂ ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್‌ಗಳನ್ನು ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಲು ಎಂದು ಸೂಚಿಸಿದರು.