ವಿಜಯಪುರ:ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ವಿಜಯಮಹಾಂತೇಶ ದಾನಮ್ಮನವರ್ ಅವರು ರೈತರ ಜತೆ ಸಭೆ ನಡೆಸಿದರು. ಸಭೆಯಲ್ಲಿ ರೈತರು ಪ್ರತಿ ಟನ್ ಕಬ್ಬಿನ ಬೆಲೆಯನ್ನು ಕನಿಷ್ಠ 3,800 ರೂಪಾಯಿ ನಿಗದಿ ಮಾಡಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಯಾವುದೇ ರೀತಿಯ ಇತ್ಯರ್ಥಕ್ಕೆ ಬಾರದ ಕಾರಣ ಸಭೆಯಿಂದ ಹೊರನಡೆದ ರೈತರು, ಡಿಸಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನವ್ಮನವರ್ 9 ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜತೆ ಸುಮಾರು ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದರು. ರೈತರ ಬೇಡಿಕೆಗಳನ್ನು ಸರ್ಕಾರಕ್ಕೆ ತಿಳಿಸುವೆ ಹಾಗೂ ಸಭೆಯಲ್ಲಿದ್ದ ಕಬ್ಬು ಕಾರ್ಖಾನೆ ಮಾಲೀಕರಿಗೆ ಸೂಚಿಸುವುದಾಗಿ ಹೇಳಿದರು. ರೈತರು ಕಬ್ಬಿನ ಬಾಕಿ ಬಿಲ್ಅನ್ನು ಸಹ ತಕ್ಷಣ ಪಾವತಿಸಲು ಕಾರ್ಖಾನೆ ಮಾಲೀಕರಿಗೆ ಸೂಚಿಸಬೇಕು ಎಂದು ಪಟ್ಟು ಹಿಡಿದರು.
ಎಫ್ಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆ ಪಾವತಿಸಬೇಕು ಎಂದು ಒತ್ತಾಯಿಸಿದರು. ಆದರೆ ಇದಕ್ಕೆ ಒಪ್ಪದ ಕಾರ್ಖಾನೆ ಮಾಲೀಕರು ತಮ್ಮ ವಾರ್ಷಿಕ ಆಯವ್ಯಯ, ಆದಾಯ ಖರ್ಚು ನೋಡಿಕೊಂಡು ಹೆಚ್ಚಿನ ಬೆಲೆ ನೀಡುವುದಾಗಿ ಬೆಳೆಗಾರರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೂ ಒಪ್ಪದ ಕಬ್ಬು ಬೆಳೆಗಾರರು ಪಕ್ಕದ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಬೆಳೆಗಾರರ ಬೇಡಿಕೆಗೆ ಅನುಗುಣವಾಗಿ ಕಬ್ಬಿನ ದರ ನಿಗದಿ ಮಾಡಲಾಗಿದೆ. ಅವರಿಗೆ ಸಾಧ್ಯವಾಗಬೇಕಾದರೆ ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಏಕೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಭಾರಿ ಆಕ್ರೋಶ: ಪ್ರತಿ ವರ್ಷ ಇದೇ ಸಬೂಬು ಹೇಳಿಕೊಂಡು ಬೆಳೆಗಾರರಿಗೆ ಮೋಸ ಮಾಡಲಾಗುತ್ತಿದೆ. ಕಬ್ಬು ಬೆಳೆಯುವ ಖರ್ಚು ವೆಚ್ಚಗಳನ್ನು ಒಮ್ಮೆ ಪರಿಶೀಲನೆ ಮಾಡಿ, ಆಗ ಬೆಳೆಗಾರರ ಕಷ್ಟ ಗೊತ್ತಾಗುತ್ತದೆ. ಕೇವಲ ಲಾಭದ ದೃಷ್ಟಿ ಇಟ್ಟುಕೊಂಡು ಪ್ರಭಾವಿ ಸಕ್ಕರೆ ಕಾರ್ಖಾನೆ ಮಾಲೀಕರು ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಯಿತು.