ಕರ್ನಾಟಕ

karnataka

By

Published : Dec 11, 2019, 8:18 AM IST

ETV Bharat / state

ವಿಜಯಪುರದಲ್ಲಿ ಆದರ್ಶ ಗ್ರಾಮಗಳ ಸಮಿತಿ ತರಬೇತಿ ಸಭೆ

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಸಂಪೂರ್ಣವಾಗಿ ಆದರ್ಶ ಗ್ರಾಮಗಳನ್ನಾಗಿ ಪರಿವರ್ತಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

dc-meeting-in-vijayapur
ವಿಜಯಪುರದಲ್ಲಿ ಆದರ್ಶ ಗ್ರಾಮಗಳ ಸಮಿತಿಯ ತರಬೇತಿ ಸಭೆ

ವಿಜಯಪುರ: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಸಂಪೂರ್ಣವಾಗಿ ಆದರ್ಶ ಗ್ರಾಮಗಳನ್ನಾಗಿ ಪರಿವರ್ತಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಗ್ರಾಮ ಮಟ್ಟದ ಸಮಿತಿಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಯೋಜನೆಯಡಿ ಪರಿಶಿಷ್ಟ ಜನಾಂಗದವರು ಹೆಚ್ಚಿರುವ ಗ್ರಾಮಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಗ್ರಾಮಗಳಲ್ಲಿ ಶೈಕ್ಷಣಿಕ ಪ್ರಗತಿ ಹೆಚ್ಚಿಸುವುದರ ಜೊತೆಗೆ ಮೂಲ ಸೌಕರ್ಯಗಳನ್ನು ಆ ಗ್ರಾಮಗಳಿಗೆ ಕಲ್ಪಿಸುವುದಾಗಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಸಂಸದರ ಆದರ್ಶ ಗ್ರಾಮವಾಗಿ ಅಭಿವೃದ್ದಿಪಡಿಸುವಲ್ಲಿ ಅಧಿಕಾರಿಗಳು ಶ್ರಮಿಸುವಂತೆ ಅವರು ತಿಳಿಸಿದರು.

2018-19ನೇ ಸಾಲಿನ ಅಡಿ ಜಿಲ್ಲೆಯ ವಿಜಯಪುರ ತಾಲೂಕಿನ ಜಾಲಗೇರಿ, ಬರಟಗಿ, ಮಖಣಾಪುರ, ಕನ್ನಾಳ, ಹುಬನೂರ, ಇಂಡಿ ತಾಲೂಕಿನ ಲಿಂಗದಳ್ಳಿ ಮತ್ತು ಹಡಲಸಂಗ, ಸಿಂದಗಿ ತಾಲೂಕಿನ ದೇವೂರ, ಗುತ್ತರಗಿ ಹಾಗೂ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಪ್ರತಿಯೊಂದು ಗ್ರಾಮಕ್ಕೆ 40 ಲಕ್ಷ ರೂ. ಅನುದಾನವನ್ನು ವೆಚ್ಚ ಮಾಡಲಾಗುತ್ತಿದ್ದು, ಈಗಾಗಲೇ ಗ್ರಾಮಗಳಲ್ಲಿ ಸಮಗ್ರ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾ ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಇನ್ನು ಜಿಲ್ಲಾ ಪಂಚಾಯತ್ ಸಿಇಒ ಗೋವಿಂದರೆಡ್ಡಿ ಮಾತನಾಡಿ, ಆಯ್ಕೆಯಾದ ಗ್ರಾಮಗಳಲ್ಲಿ ಗ್ರಾಮ ಮಟ್ಟದ ಸಭೆಯನ್ನು ಕರೆದು, ಈ ಯೋಜನೆಯಡಿ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಶಾಲೆ ಮತ್ತು ಅಂಗನವಾಡಿಗಳಲ್ಲಿನ ಶೌಚಾಲಯಗಳ ನಿರ್ಮಾಣ - ದುರಸ್ತಿ ಕಾರ್ಯ, ಕುಡಿವ ನೀರು ಮತ್ತು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಸೋಲಾರ ದೀಪ ಹಾಗೂ ಬೀದಿ ದೀಪಗಳನ್ನು ಅಭಿವೃದ್ದಿಗೊಳಿಸುವ ಕಾಮಗಾರಿಗಳನ್ನು ಮುಖ್ಯವಾಗಿ ಕೈಗೊಳ್ಳಬೇಕು ಎಂದರು.

ಅದರಂತೆ ವಿವಿಧ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಸಭೆ ಕರೆದು, ಸಭೆಯಲ್ಲಿ ಅನುಮೋದನೆ ಪಡೆದು, ಜಿಲ್ಲಾ ಮಟ್ಟದ ಸಮಿತಿಗೆ ಅನುಮೋದನೆಗಾಗಿ ಡಿಸೆಂಬರ್ 20ರೊಳಗೆ ಸಲ್ಲಿಸಬೇಕು ಎಂದು ಹೇಳಿದರು.

For All Latest Updates

ABOUT THE AUTHOR

...view details