ವಿಜಯಪುರ:ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಮಾರಾಟಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೂಚಿಸಿದರು.
ಕೃಷಿ ಚಟುವಟಿಕೆಗಳ ಅಗತ್ಯ ನೆರವಿಗೆ ಡಿಸಿ ಸೂಚನೆ ಜಿಲ್ಲಾಧಿಕಾರಿ ಸಭಾ ಭವನದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೋಟಗಾರಿಕೆ, ಕೃಷಿ, ಎಪಿಎಂಸಿ ಹಾಗೂ ಪಶು ಸಂಗೋಪನೆ ಅಧಿಕಾರಿಗಳು ಆಯಾ ವಲಯ, ತಾಲೂಕು, ನಗರಗಳಿಗೆ ಸಂಬಂಧಿಸಿದಂತೆ ರೈತರಿಗೆ ನೆರವು ನೀಡಬೇಕು. ಕೊರೊನಾ ಭೀತಿಯಿಂದಾಗಿ ಜಿಲ್ಲೆಯ ಸಾಕಷ್ಟು ಜನ ರೈತರು ಕೃಷಿ ಉತ್ಪನ್ನ ಮಾರಾಟ ಮಾಡಲು ತೊಂದರೆ ಅನುಭವಿಸುವಂತಾಗಿದೆ ಎಂದರು.
ಇನ್ನೊಂದೆಡೆ ರೈತರಿಗೆ ಅಗತ್ಯ ಕೀಟನಾಶಕ, ರಸಗೊಬ್ಬರ, ಬೀಜ ಸೇರಿದಂತೆ ಕೃಷಿ ಚಟುವಟಿಗಳಿಗೆ ಸಂಬಂಧಿಸಿದ ಅಗತ್ಯ ಪರಿಕರಗಳು ಸಿಗುವಂತೆ ನೋಡಿಕೊಳ್ಳಬೇಕು. ಕೃಷಿಗೆ ಸಂಬಂಧಿಸಿದ ಯಾವುದೇ ದೂರುಗಳು ರೈತರಿಂದ ಕೇಳಿ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಇನ್ನು ಎಪಿಎಂಸಿ ಮಾರುಕಟ್ಟೆಗೆ ಬರುವ ರೈತರಿಗೆ ಅಧಿಕಾರಿಗಳು ನಿಯಮಾನುಸಾರ ನಡೆದುಕೊಳ್ಳುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದರು. ನಗರದಲ್ಲಿ 200ಕ್ಕೂ ಅಧಿಕ ಬಿಡಾಡಿ ದನಗಳಿದ್ದು, ಅವುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಉಚಿತ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ವೈ ಎಸ್.ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು.