ಮುದ್ದೇಬಿಹಾಳ: ಉತ್ತರಪ್ರದೇಶದ ಹಥ್ರಾಸ್‌ನ ವಾಲ್ಮೀಕಿ ಸಮುದಾಯದ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಬಹುಜನ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ವಾಲ್ಮೀಕಿ ಸಮಾಜದ ಬಾಂಧವರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಮುದ್ದೇಬಿಹಾಳ: ಹಥ್ರಾಸ್ ಘಟನೆ ಖಂಡಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ
ಹಥ್ರಾಸ್ ಅತ್ಯಾಚಾರ ಘಟನೆ ಖಂಡಿಸಿ ಬಹುಜನ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ವಾಲ್ಮೀಕಿ ಸಮಾಜದ ಬಾಂಧವರು ಪ್ರತಿಭಟನೆ ನಡೆಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಮೂಲಕ ನಡೆದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದ ಮುಖಾಂತರ ತಹಶೀಲ್ದಾರ್ ಕಚೇರಿಗೆ ತಲುಪಿತು. ವಾಲ್ಮೀಕಿ ಸಮಾಜದ ಮುಖಂಡ ಶಿವು ಕನ್ನೊಳ್ಳಿ ಮಾತನಾಡಿ, ಉತ್ತರಪ್ರದೇಶ ಸರ್ಕಾರ ಹಥ್ರಾಸ್ ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಇಂತಹ ಘಟನೆಗಳನ್ನು ಖಂಡಿಸಬೇಕು. ಸಿಬಿಐ ತನಿಖೆ ನಡೆಸುವುದಾಗಿ ಈಗ ಆದೇಶ ಮಾಡುವುದು ಮೂರ್ಖತನದ ಪರಮಾವಧಿ. ಕೂಡಲೇ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ವಕೀಲ ಕೆ.ಬಿ.ದೊಡಮನಿ ಮಾತನಾಡಿ, ಯುವತಿಯ ಕುಟುಂಬಕ್ಕೆ ಶವ ನೀಡದೆ ಉತ್ತರಪ್ರದೇಶದ ಸರ್ಕಾರ ಅಂತ್ಯ ಸಂಸ್ಕಾರ ಮಾಡಿರುವುದು ಖಂಡನೀಯ. ಯೋಗಿ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಈ ಅತ್ಯಾಚಾರ ಪ್ರಕರಣವನ್ನು ದೇಶವ್ಯಾಪಿ ಖಂಡಿಸುತ್ತಿದ್ದಾರೆ. ಅತ್ಯಾಚಾರ ಪ್ರಕರಣದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಅತ್ಯಾಚಾರವೆಸಗಿದ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಗ್ರೇಡ್-2 ತಹಶೀಲ್ದಾರ್ ಡಿ.ಜಿ.ಕಳ್ಳಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.