ಸೈಕ್ಲಿಸ್ಟ್ ಪಾಯಲ್ ಚವ್ಹಾಣ್ ಅವರು ಮಾತನಾಡಿದ್ದಾರೆ ವಿಜಯಪುರ : ಗುಮ್ಮಟ ನಗರಿ ವಿಜಯಪುರ ಸೈಕ್ಲಿಂಗ್ ಕ್ರೀಡಾ ಪಟುಗಳ ತವರೂರು. ಇಲ್ಲಿನ ಸೈಕ್ಲಿಂಗ್ ಕ್ರೀಡಾಪಟುಗಳು ದೇಶ ವಿದೇಶಗಳಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸೈಕ್ಲಿಂಗ್ನಲ್ಲಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಗುಮ್ಮಟ ನಗರಿ ವಿಜಯಪುರದ ಬಾಲಕಿ ಅಂತಾರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆ ಆಗಿದ್ದಾರೆ. ಆದರೆ ರೋಡ್ ಸೈಕ್ಲಿಂಗ್ಗೆ ಬೇಕಾದ ಸೈಕಲ್ ಖರೀದಿಗೆ ಇವರ ಬಳಿ ಹಣ ಇಲ್ಲ. ಹೀಗಾಗಿ ದಾನಿಗಳ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ ಈ ಕ್ರೀಡಾಪಟು.
ಇವಳ ಹೆಸರು ಪಾಯಲ್ ಚವ್ಹಾಣ್. ವಿಜಯಪುರ ಸೈಕ್ಲಿಂಗ್ ಕ್ರೀಡಾಪಟು. 18 ವರ್ಷದ ಬಾಲಕಿಯರ ವಿಭಾಗದಲ್ಲಿ ಥಾಯ್ಲೆಂಡ್ನಲ್ಲಿ ಜೂನ್ 7 ರಿಂದ 13 ವರೆಗೆ ನಡೆಯೋ ಏಷಿಯನ್ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾಳೆ.
ನಿತ್ಯ ತರಬೇತಿ ಪಡೆಯಲು ಬಸವನ ಬಾಗೇವಾಡಿಯಿಂದ ವಿಜಯಪುರಕ್ಕೆ ಬರ ಬೇಕಾಗಿದೆ. ಹೀಗಾಗಿ ಬಡತನದಲ್ಲಿರುವ ಆಕೆ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾಳೆ. ಇದೀಗ ರೋಡ್ ಸೈಕ್ಲಿಂಗ್ಗೆ ಬೇಕಾದ ಸೈಕಲ್ ಇಲ್ಲ. ಹೀಗಾಗಿ ರೋಡ್ ಸೈಕ್ಲಿಂಗ್ ಸ್ಪರ್ಧೆಯ ಸೈಕಲ್ ಖರೀದಿಗೆ ಬರೋಬ್ಬರಿ 7 ಲಕ್ಷ ಹಣ ಬೇಕಾಗುತ್ತದೆ. ಹೀಗಾಗಿ ಯಾರಾದರೂ ದಾನಿಗಳ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ತಾಯಿ ಸುಶೀಲಾಬಾಯಿ ಕಾಯಿಪಲ್ಲೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಷ್ಟೊಂದು ಹಣ ಎಲ್ಲಿಂದ ತರೋದು ಅಂತ ಪೋಷಕರು ಚಿಂತೆಗೀಡಾಗಿದ್ದಾರೆ.
ಪಾಯಲ್ ಚವ್ಹಾಣ್ ಸೈಕ್ಲಿಂಗ್ನಲ್ಲಿ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ಜಿಲ್ಲೆ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ. ಥಾಯ್ಲೆಂಡ್ನಲ್ಲಿ ನಡೆಯಲಿರುವ ಏಷಿಯನ್ ರೋಡ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಹಗಲಿರುಳು ಸೈಕ್ಲಿಂಗ್ ಪ್ರಾಕ್ಟೀಸ್ ಮಾಡ್ತಿದ್ದಾರೆ ಪಾಯಲ್ ಚವ್ಹಾಣ್.
ಸೈಕಲ್ ಖರೀದಿಗೆ ಆರ್ಥಿಕ ಸಹಾಯ ಮಾಡುವಂತೆ ಮನವಿ: ಈ ಬಗ್ಗೆ ಮಾತನಾಡಿರುವ ಪಾಯಲ್ ಚವ್ಹಾಣ್, ನಾನು ಈಗ ಸೈಕ್ಲಿಂಗ್ನಲ್ಲಿ ನ್ಯಾಷನಲ್ ಲೆವೆಲ್ನಲ್ಲಿ ಪ್ಲೇಸ್ ಮಾಡಿದ್ದೇನೆ. ಈಗ ಇಂಟರ್ನ್ಯಾಷನಲ್ ಲೆವೆಲ್ಗೆ ಆಯ್ಕೆಯಾಗಿದ್ದೇನೆ. ಈ ಬಗ್ಗೆ ನನಗೆ ಬಹಳ ಖುಷಿ ಇದೆ. ನನ್ನ ಹತ್ತಿರ ಇಂಟರ್ನ್ಯಾಷನಲ್ ಲೆವೆಲ್ಗೆ ತೆಗೆದುಕೊಂಡು ಹೋಗುವಂತಹ ಸೈಕಲ್ ಇಲ್ಲ. ಬೇಸಿಕ್ ಮಾಡೆಲ್ ಸೈಕಲ್ ಇದೆ. ಅದರಲ್ಲೇ ನಾನು ಟ್ರೈನಿಂಗ್ ಮಾಡುತ್ತಿದ್ದೇನೆ. ಈ ಸ್ಪರ್ಧೆ ಥಾಯ್ಲೆಂಡ್ನಲ್ಲಿ ಜೂನ್ 7ರಿಂದ 13ವರೆಗೆ ನಡೆಯಲಿದೆ. ಹಾಗಾಗಿ ನನಗೆ ಇಂಟರ್ನ್ಯಾಷನಲ್ಗೆ ಕೊಂಡೊಯ್ಯುವಂತಹ ಸೈಕಲ್ ಬೇಕಾಗಿತ್ತು. ಹೀಗಾಗಿ ಯಾರಾದರೂ ದಾನಿಗಳು ನಮಗೆ ಸಹಾಯ ಮಾಡಿ. ಇದರ ಬೆಲೆ ಅಂದಾಜು 6-7 ಲಕ್ಷ ಇರಬಹುದು ಎಂದು ಮನವಿ ಮಾಡಿದ್ದಾರೆ.
ವಿದೇಶಕ್ಕೆ ತೆರಳಲು ಪಾಸ್ ಪೋರ್ಟ್ ಕೂಡಾ ಬಂದಿದೆ: ಇನ್ನು ಪಾಯಲ್ ಅವರ ತರಬೇತುದಾರ ರಮೇಶ ರಾಠೋಡ್ ಮಾತನಾಡಿ, ಕ್ರೀಡಾಪಟು ಪಾಯಲ್ ಚವ್ಹಾಣ್ ಸಾಧನೆಗೆ ಆರ್ಥಿಕ ನೆರವು ಅವಶ್ಯಕವಿದ್ದು, ಈಗಾಗಲೇ ವಿದೇಶಕ್ಕೆ ತೆರಳಲು ಪಾಸ್ ಪೋರ್ಟ್ ಕೂಡಾ ಬಂದಿದೆ. ಜೊತೆಗೆ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದಿಂದ ಆಯ್ಕೆಯಾದ ಪತ್ರ ಬಂದಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ರೋಡ್ ಸೈಕ್ಲಿಂಗ್ ಬೇಕಾಗಿದ್ದು, ಪಾಯಲ್ ಚವ್ಹಾಣ ಅಕೌಂಟ್ ನಂಬರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆದರ್ಶನಗರ ಶಾಖೆ ಖಾತೆ ಸಂಖ್ಯೆ 33333419430, ಐಎಫ್‌ಸಿ ಕೋಡ್, ಎಸ್ಬಿಐಎನ್ 13385 ಗೆ ಕಳುಹಿಸಿ ಸಹಾಯ ಮಾಡುವಂತೆ ಕೋರಿದ್ದಾರೆ.
ಇದನ್ನೂ ಓದಿ:'ಗ್ರ್ಯಾಂಡ್ ಮಾಸ್ಟರ್' ಉಪ್ಪಳ ಪ್ರಣೀತ್‌ಗೆ ಸಿಎಂ ಕೆಸಿಆರ್ ಅಭಿನಂದನೆ.. 2.5 ಕೋಟಿ ನೆರವು ಘೋಷಣೆ