ವಿಜಯಪುರ: ಕಳೆದ ಒಂದು ವಾರದಿಂದ ಜಿಲ್ಲಾದ್ಯಂತ ಮಳೆ ಆರ್ಭಟ ಜೋರಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಅನ್ನದಾತ ಬೆಳೆದ ಬೆಳೆ ಸಹ ಸಂಪೂರ್ಣ ನಾಶವಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಮುಂದಿನ ಹಿಂಗಾರು ಹಂಗಾಮಿಗೆ ಜೋಳ ಬೆಳೆಯುವದು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.
ಭಾರೀ ಮಳೆಗೆ ನೆಲಕಚ್ಚಿದ ರೈತನ ಕನಸು: ಸಂಕಷ್ಟಕ್ಕೀಡಾದ ಅನ್ನದಾತ - heavy rain in Vijayapura
ನಿನ್ನೆ ರಾತ್ರಿ ಸುರಿದ ಮಳೆಯಿಂದ ಡೋಣಿ ನದಿಗೂ ಪ್ರವಾಹ ಎದುರಾಗಿದೆ. ವಿಜಯಪುರದ ಸುತ್ತಮುತ್ತಲ ರೈತರ ಬೆಳೆ ಮಳೆಗೆ ನಾಶವಾಗಿದೆ. ಈ ಹಿನ್ನೆಲೆ ಮುಂದೇನು ಎಂದು ರೈತ ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ.
ಸತತ ಮಳೆಯಿಂದ ಮುಂಗಾರು ಬೆಳೆ ನೀರಿನಲ್ಲಿ ನೆಲಕಚ್ಚಿದ್ದರೆ, ಹಿಂಗಾರು ಹಂಗಾಮಿಗೂ ಮಳೆರಾಯ ಸಹ ಕಂಟಕ ತಂದೊಡ್ಡಿದ್ದಾನೆ. ಬರದನಾಡು ವಿಜಯಪುರ ಜಿಲ್ಲೆಯಲ್ಲಿ ಒಮ್ಮೆ ಅನಾವೃಷ್ಠಿಯಾದರೆ ಮತ್ತೊಮ್ಮೆ ಅತಿವೃಷ್ಠಿಯಾಗಿ ಅನ್ನದಾತ ಕಣ್ಣಿರಿನಲ್ಲಿನ ಕೈ ತೊಳೆದುಕೊಳ್ಳಬೇಕಾದ ಪರಿಸ್ಥಿತಿ ಪ್ರತಿ ವರ್ಷ ಎದುರಾಗುತ್ತದೆ. ಈ ವರ್ಷ ತೊಗರಿ, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ಒಣ ಬೇಸಾಯ ಮತ್ತು ವಾಣಿಜ್ಯ ಬೆಳೆಗೆ ಉತ್ತಮ ಮಳೆಯಾದ ಕಾರಣ ರೈತ ಸಂತಸಗೊಂಡಿದ್ದನು. ಇನ್ನೇನು ಬೆಳೆ ಕೈ ಸೇರುತ್ತದೆ ಎನ್ನುವಾಗಲೇ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಬೆಳೆದು ನಿಂತ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ನಿನ್ನೆ ರಾತ್ರಿ ಸುರಿದ ಮಳೆಯಿಂದ ಡೋಣಿ ನದಿಗೂ ಪ್ರವಾಹ ಎದುರಾಗಿದೆ. ವಿಜಯಪುರ ತಾಲೂಕಿನಲ್ಲಿ 37.0 ಮಿ.ಮೀಟರ್, ಭೂತನಾಳ 94.2, ಬಬಲೇಶ್ವರ 34.4, ಹಿಟ್ಬಳ್ಳಿ 22.0, ತಿಕೋಟಾ 16.0 ಹಾಗೂ ಕನ್ನೂರ ಗ್ರಾಮದಲ್ಲಿ 20.9 ಮೀಲಿ ಮೀಟರ್ ಮಳೆಯಾಗಿದೆ. ಬಬಲೇಶ್ವರ, ತಿಕೋಟಾ, ಸಾರವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಮಳೆ ನೀರಿನಿಂದ ತೊಂದರೆ ಅನುಭವಿಸಬೇಕಾಗಿದೆ. ಕೇವಲ ಬಬಲೇಶ್ವರ ತಾಲೂಕಿನಲ್ಲಿ 150 ಕ್ಕೂ ಹೆಚ್ಚು ಹೆಕ್ಟರ್ ಬೆಳೆ ಸಂಪೂರ್ಣ ನಾಶವಾಗಿದೆ. ಭಾನುವಾರ ಬಬಲೇಶ್ವರ ತಾಲೂಕು ತಹಶೀಲ್ದಾರ್ ಹಾಗೂ ಅಧಿಕಾರಿಗಳು ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.