ವಿಜಯಪುರ: ಪ್ರವಾಹ, ಪ್ರಕೃತಿ ವಿಕೋಪ, ಬೆಳೆಗೆ ವಿವಿಧ ರೋಗ ಬಾಧೆಯಿಂದ ನಷ್ಟ ಅನುಭವಿಸುತ್ತಿರುವ ಅನ್ನದಾತ ತನ್ನ ಬೆಳೆ ಹಾನಿಯ ವಿವರವನ್ನು ಫೋಟೋ ಸಮೇತ ದಾಖಲಿಸಲು ಸರ್ಕಾರ ಹೊಸ ಆ್ಯಪ್ ಆರಂಭಿಸಿದೆ. ಪ್ರತಿ ವರ್ಷ ಅಕಾಲಿಕ ಮಳೆ, ಬರದಿಂದ ತತ್ತರಿಸಿ ಹೋಗಿರುವ ರೈತ ಈಗ ಆಂಡ್ರಾಯ್ಡ್ ಮೊಬೈಲ್ ಬಳಸುವ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಈ ಆ್ಯಪ್ ಬಳಕೆಗೆ ಕಡಿಮೆ ಅವಧಿ ನಿಗದಿಪಡಿಸಿದ್ದು ಒಂದು ಕಡೆಯಾದರೆ, ಅನಕ್ಷರಸ್ಥ ರೈತರು ಆ್ಯಪ್ ಬಳಸಬಹುದಾ ಎಂಬ ಪ್ರಶ್ನೆ ಮತ್ತೊಂದೆಡೆ ಕಾಡುತ್ತಿದೆ. ಮುಂದಾಲೋಚನೆ ಇಲ್ಲದ ಈ ಯೋಜನೆಗೆ ರೈತ ವರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿದೆ. ಬರದ ನಾಡು ವಿಜಯಪುರ ಜಿಲ್ಲೆಯಲ್ಲಿ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಪ್ರತಿ ವರ್ಷ ಅನ್ನದಾತ ಬೆಳೆದ ಬೆಳೆಗಳು ನಾಶವಾಗುತ್ತಲೇ ಇರುತ್ತವೆ. ಈ ಬೆಳೆದ ಅಲ್ಪಸ್ವಲ್ಪ ಬೆಳಗೆ ಸೂಕ್ತ ಬೆಂಬಲ ಬೆಲೆ ಮಾತ್ರ ತಮಗೆ ತಲುಪುವದಿಲ್ಲ ಎನ್ನುವ ಆರೋಪಗಳು ರೈತರಿಂದ ಕೇಳಿಬರುತ್ತಿವೆ.
ಕಾಟಾಚಾರಕ್ಕೆ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ ಕೈತೊಳೆದುಕೊಳ್ಳುವ ಕೆಲಸ ನಡೆಯುತ್ತಿವೆ. ಇದನ್ನು ತಪ್ಪಿಸಿ, ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಸರ್ಕಾರವು ರೈತರು ತಮ್ಮ ಬೆಳೆ ನಾಶವನ್ನು ತಾನೆ ಸಮೀಕ್ಷೆ ನಡೆಸಿ, ಮೊಬೈಲ್ ಮೂಲಕ ಅದನ್ನು ಅಪ್ಲೋಡ್ ಮಾಡಲು ಆ್ಯಪ್ ತಯಾರಿಸಿದೆ. ಸದ್ಯ ಈ ಆ್ಯಪ್ ಭರ್ತಿಗೆ ರೈತರಿಗೆ ಸರ್ಕಾರ ಕಾಲಾವಕಾಶ ನಿಗದಿ ಮಾಡಿದೆ. ಮೊದಲೇ ಅನಕ್ಷರಸ್ಥನಾಗಿರುವ ರೈತರಿಗೆ ಮೊಬೈಲ್ ಬಳಕೆಯೇ ಗೊತ್ತಿರುವುದಿಲ್ಲ. ಆ್ಯಪ್ ಬಳಸಲು ಆಂಡ್ರಾಯ್ಡ್ ಮೊಬೈಲ್ ಖರೀದಿಸಬೇಕಾಗಿದ್ದು, ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಸರಿಯಾದ ಪ್ರಚಾರ ಮಾಡದ ಈ ಯೋಜನೆ ಬಹುತೇಕ ರೈತರಿಗೆ ಗೊತ್ತೇ ಇಲ್ಲ. ಮೊಬೈಲ್ ಬಳಸುವ ರೈತ ಈ ಯೋಜನೆಯನ್ನು ಅರೆಮಾನದಿಂದಲೇ ನಿಂದಲೇ ಸ್ವಾಗತಿಸಿದ್ದಾನೆ.