ಕರ್ನಾಟಕ

karnataka

ETV Bharat / state

ಅಪಾರ ಪ್ರಮಾಣದ ಬೆಳೆ ಹಾನಿ: ಉಪ ಕಾಲುವೆ ಒಡೆದು ರೈತರ ಜಮೀನಿಗೆ ನುಗ್ಗಿದ ನೀರು...

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕೆಬಿಜೆಎನ್‌ಎಲ್‌ನಿಂದ ನಿರ್ಮಾಣಗೊಂಡಿರುವ ಉಪ ಕಾಲುವೆಯನ್ನು ಒಡೆದು ಅಪಾರ ಪ್ರಮಾಣದ ನೀರು ಸುತ್ತಮುತ್ತಲಿನ ರೈತರ ಜಮೀನುಗಳಿಗೆ ನುಗ್ಗಿ ಘಟನೆ ಬೆಳಕಿಗೆ ಬಂದಿದೆ.

muddhebihala
ರೈತರ ಜಮೀನಿಗೆ ನುಗ್ಗಿದ ನೀರು

By

Published : Oct 12, 2020, 9:22 PM IST

ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕೆಬಿಜೆಎನ್‌ಎಲ್‌ನಿಂದ ನಿರ್ಮಾಣಗೊಂಡಿರುವ ಉಪ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಸುತ್ತಮುತ್ತಲಿನ ರೈತರ ಜಮೀನುಗಳಿಗೆ ನುಗ್ಗಿದ ಘಟನೆ ಬೆಳಕಿಗೆ ಬಂದಿದೆ.

ಗ್ರಾಮದ ರೈತರಾದ ಬಸಯ್ಯ ಮಠ, ಚನ್ನಬಸಯ್ಯ ಮಠ, ಸುಭಾಸ ಅಂಗಡಿ, ಬಸವರಾಜ ನಡುವಿನಮನಿ, ಬಸವರಾಜ ಕೋಲಕಾರ ಮೊದಲಾದವರು ಅಧಿಕಾರಿಗಳ ನಿರ್ಲಕ್ಷ್ಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ತಹಶೀಲ್ದಾರ್ ಜಿ.ಎಸ್.ಮಳಗಿ ಅವರು, ಕುಂಟೋಜಿ ಗ್ರಾಮದಲ್ಲಿ ಕಾಲುವೆ ಒಡೆದು ಜಮೀನಿಗೆ ನೀರು ನುಗ್ಗಿರುವ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಪರಿಶೀಲನೆ ನಡೆಸಲಾಗುವುದು. ಬೆಳೆ ಹಾನಿಯ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಕಾಲುವೆ ಪಕ್ಕದಲ್ಲಿಯೇ ಬರುವ ಗ್ರಾಮದ ವೀರಭದ್ರಯ್ಯ ಮಠ ಅವರ ಹೊಲದ ಹತ್ತಿರ ಇರುವ ಕೆನಾಲ್​ನ್ನು ಕಳೆದ ಐದು ದಿನಗಳ ಹಿಂದೆ ಏಕಾಏಕಿ ಒಡೆದು ನೀರು ಹರಿಬಿಡಲಾಗಿದೆ. ಇದರಿಂದ ಢವಳಗಿ ರಸ್ತೆ ಸಂಪೂರ್ಣ ಹಾಳಾಗಿ ತಮ್ಮ ಜಮೀನುಗಳಿಗೆ ಅಡ್ಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ದೂರಿದ್ದಾರೆ.

ಉಪ ಕಾಲುವೆ ಒಡೆದು ರೈತರ ಜಮೀನಿಗೆ ನೀರು ನುಗ್ಗಿದೆ.

ಕುಂಟೋಜಿ ಗ್ರಾಮದ ಸರ್ವೆ ನಂ.369/1,369/2,369/3,369/4 ರಲ್ಲಿ ಬರುವ ಇಪ್ಪತ್ತು ಎಕರೆ ಜಮೀನಿನಲ್ಲಿ ತೊಗರಿ ಬೆಳೆ ಸಂಪೂರ್ಣ ಉಪ ಕಾಲುವೆಯಿಂದ ಹರಿಯುತ್ತಿರುವ ನೀರಿನಿಂದ ಜಲಾವೃತವಾಗಿದ್ದು ರೈತರಾದ ಸಂಗಮ್ಮ ಹೆಬ್ಬಾಳ, ಮಳೆಪ್ಪಗೌಡ ಚಂದಪ್ಪಗೌಡ ಬಿರಾದಾರ, ಗಣೇಶ ಹೆಬ್ಬಾಳ, ಸಿದ್ದು ಹೆಬ್ಬಾಳ ಅವರಿಗೆ ಸೇರಿದ ಜಮೀನಿನ ಬೆಳೆ ಕೊಳೆಯುವ ಹಂತಕ್ಕೆ ಬಂದಿದೆ.

ಇನ್ನು ಕುಂಟೋಜಿ ಗ್ರಾಮದ ರೈತ ಸಿದ್ದು ಹೆಬ್ಬಾಳ ಮಾತನಾಡಿ, ಕೆಬಿಜೆಎನ್‌ಎಲ್ ಅಧಿಕಾರಿಗಳ ಬೇಜವಾಬ್ದಾರಿತನದ ನಿರ್ಧಾರವೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಹಾಳಾಗಿರುವ ರಸ್ತೆಯ ಕುರಿತು ಮತ್ತು ತೊಗರಿ ಬೆಳೆ ಹಾಳಾಗಿರುವ ಬಗ್ಗೆಯೂ ರೈತರೆಲ್ಲರೂ ಈಗಾಗಲೇ ಕೃಷಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕೆಬಿಜೆಎನ್‌ಎಲ್ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೂಡಲೇ ಹಾಳಾಗಿರುವ ಬೆಳೆಗೆ ಸರ್ಕಾರ ಕೆಬಿಜೆಎನ್‌ಎಲ್ ಮೂಲಕ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details