ವಿಜಯಪುರ : ರೌಡಿಶೀಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಆಲಮೇಲ ಪೊಲೀಸರು ಬಂಧಿಸಿದ್ದಾರೆ. ಆಲಮೇಲ ತಾಲೂಕಿನ ದೇವರ ನಾವದಗಿಯ ನಿವಾಸಿಗಳಾದ ಮಲ್ಲಿಕಾರ್ಜುನ್ ಜನಿವಾರ, ಅನ್ವರ್ ನದಾಫ್ ಹಾಗೂ ಸಂತೋಷ ಕುಮಸಗಿ ಬಂಧಿತರು.
ಜುಲೈ 11 ರಂದು ರೌಡಿಶೀಟರ್ ಮಾಳಪ್ಪ ಮೇತ್ರಿ (45) ಎಂಬಾತನನ್ನು ಹಾಡಹಗಲೇ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಗಳಲ್ಲಿ ಭಾಗಿಯಾಗಿರುವ ಇನ್ನೂ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಬಲೆ ಬೀಸಲಾಗಿದೆ. ಈ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಕೊಲೆ ಪ್ರಕರಣ : ಇನ್ನು ಖಾಸಗಿ ಕಂಪನಿಗೆ ನುಗ್ಗಿ ಎಂಡಿ ಮತ್ತು ಸಿಇಒ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪ್ರಕರಣದ ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣಾ ಪೊಲೀಸರು ಇದೇ ತಿಂಗಳ 12 ನೇ ತಾರೀಖಿನಂದು ಬಂಧಿಸಿದ್ದರು. ಕೇಸ್ಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡ ಆರೋಪಿಗಳಾದ ಫೆಲಿಕ್ಸ್, ವಿನಯ್ ರೆಡ್ಡಿ ಹಾಗೂ ಶಿವು ಎಂಬವರನ್ನು ಕುಣಿಗಲ್ ಸಮೀಪ ಬಂಧಿಸಿತ್ತು.
ಇದನ್ನೂ ಓದಿ :ಬೆಂಗಳೂರಿನಲ್ಲಿ ಸಿಇಒ, ಎಂಡಿ ಜೋಡಿ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ
ಪ್ರಕರಣದ ಹಿನ್ನೆಲೆ : ಜುಲೈ 11 ರ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಮಾರಕಾಸ್ತ್ರ ಹಿಡಿದು ಕಂಪನಿ ಕಚೇರಿಗೆ ನುಗ್ಗಿದ್ದ ಫೆಲಿಕ್ಸ್ ಹಾಗೂ ಇತರರು ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯಂ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನು ಕುಮಾರ್ ಅವರನ್ನು ಹತ್ಯೆ ಮಾಡಿದ್ದರು. ಕೊಲೆಯಾದ ಫಣೀಂದ್ರ ಸುಬ್ರಹ್ಮಣ್ಯಂ, ವಿನು ಕುಮಾರ್ ಮತ್ತು ಆರೋಪಿ ಫಿಲಿಕ್ಸ್ ಈ ಹಿಂದೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಜೀ ನೆಟ್ ಎಂಬ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. 6 ತಿಂಗಳ ಹಿಂದೆ ಫಣೀಂದ್ರ ಸುಬ್ರಹ್ಮಣ್ಯಂ ಹಾಗೂ ವಿನು ಕುಮಾರ್ ಕಂಪನಿ ತೊರೆದಿದ್ದರು. 2022ರ ನವೆಂಬರ್ನಲ್ಲಿ ಅಮೃತಹಳ್ಳಿಯ ಪಂಪಾ ಲೇಔಟ್ನಲ್ಲಿ ತಮ್ಮದೇ ಆದ ಇಂಟರ್ನೆಟ್ ಬ್ರಾಡ್ ಕಾಸ್ಟಿಂಗ್ ಎಂಬ ಹೊಸ ಕಂಪನಿ ಶುರು ಮಾಡಿದ್ದರು. ಹಾಗೆಯೇ, ಇತ್ತೀಚೆಗೆ ಫೆಲಿಕ್ಸ್ನನ್ನು ಕಂಪನಿಯ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದೇ ದ್ವೇಷಕ್ಕೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ :ಬೆಂಗಳೂರು : ರೌಡಿಶೀಟರ್ ಬರ್ಬರವಾಗಿ ಹತ್ಯೆಗೈದಿದ್ದ ಐವರು ಆರೋಪಿಗಳ ಬಂಧನ
ಬೆಂಗಳೂರು ರೌಡಿಶೀಟರ್ ಹತ್ಯೆ : ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಮಡಿವಾಳದ ರೌಡಿಶೀಟರ್ ಕಪಿಲ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ 5 ಮಂದಿ ಆರೋಪಿಗಳನ್ನು ದೇವರಜೀವನಹಳ್ಳಿ ಪೊಲೀಸರು ಜು.14 ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಜು. 13ರ ಮಂಗಳವಾರ ರಾತ್ರಿ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಪಿಲ್ನನ್ನು ಎರಡು ಸ್ಕೂಟರ್ನಲ್ಲಿ ಹಿಂಬಲಿಸಿಕೊಂಡು ಬಂದಿದ್ದ ಆರೋಪಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು. ನವೀನ್ ಕುಮಾರ್, ರಾಹುಲ್, ಪುನೀತ್ ಕುಮಾರ್, ಪವನ್ ಕುಮಾರ್ಮತ್ತು ಶಂಕರ್ ಬಂಧಿತ ಆರೋಪಿಗಳು.