ಕರ್ನಾಟಕ

karnataka

ETV Bharat / state

ಕೋವಿಡ್​ನಿಂದ ಮೃತಪಟ್ಟವರ ಶವಸಂಸ್ಕಾರ ನಡೆಸುವವರಿಗೆ ಬೇಕಿದೆ ಸೂಕ್ತ ಸೌಲಭ್ಯ - cremation workers problem of vijayapura

ಗದಗ ಮೂಲದ ಶಂಕರ ಎಂಬುವವರು ವಿಜಯನಗರದ ಸ್ಮಶಾನದಲ್ಲೇ ನೆಲೆಸಿ, ಶವಸಂಸ್ಕಾರ ಕೆಲಸ ಮಾಡಿಕೊಂಡು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.

cremation place
ಶವಸಂಸ್ಕಾರ ಸ್ಥಳ

By

Published : May 26, 2021, 8:38 AM IST

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್​​ ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ಕೂಡ ನಿತ್ಯ 8-10 ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಮೃತರ ಅಂತ್ಯಕ್ರಿಯೆಗೆ ಕೆಲ ಶಿಷ್ಟಾಚಾರವನ್ನು ಜಿಲ್ಲಾಡಳಿತ ಜಾರಿಗೊಳಿಸಿರುವ ಕಾರಣ ಅಂತ್ಯಕ್ರಿಯೆ ನಡೆಸುವುದು ಕಷ್ಟವಾಗಿದೆ.

ಸೋಂಕು ತಡೆಗೆ ಲಾಕ್​ಡೌನ್​ ಜಾರಿಯಲ್ಲಿದೆ. ಪರಿಣಾಮ ದಿನೇ ದಿನೇ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಆದ್ರೆ ಮೃತರ ಸಂಖ್ಯೆಯಲ್ಲೇನೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ವಿಜಯಪುರ ನಗರದಲ್ಲಿ ಕೇವಲ ಒಂದೇ ಸ್ಮಶಾನದಲ್ಲಿ ಮೃತ ಸೋಂಕಿತರ ಶವಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ‌ಹೀಗಾಗಿ ಶವ ಸಂಸ್ಕಾರ‌ ನಡೆಸುವವರು‌ ಸಹ ಜೀವ ಕೈಯಲ್ಲಿ ಹಿಡಿದು‌ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ. ಇವರಿಗೆ ಕನಿಷ್ಠ ಸುರಕ್ಷತಾ ಸೌಲಭ್ಯವನ್ನೂ ಸಹ ಸರ್ಕಾರ ನೀಡಿಲ್ಲ. ಸ್ಮಶಾನ ನಿರ್ವಹಣಾ ಸಮಿತಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಿದೆ.

ಕೋವಿಡ್​ನಿಂದ ಮೃತಪಟ್ಟವರ ಶವಸಂಸ್ಕಾರ ನಡೆಸುವರಿಗೆ ಬೇಕಿದೆ ಸೂಕ್ತ ಸೌಲಭ್ಯ

ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಮರಣ ಪ್ರಮಾಣ ಹೇಳುವಷ್ಟೇನು ಕಡಿಮೆಯಾಗುತ್ತಿಲ್ಲ. ಒಂದು ತಿಂಗಳ ಹಿಂದೆ 15-20 ಜನರು ನಿತ್ಯ ಸೋಂಕಿಗೆ ಪ್ರಾಣ ಬಿಡುತ್ತಿದ್ದರು. ಇದೀಗ ಇದರ ಪ್ರಮಾಣ ಕೊಂಚ ಕಡಿಮೆಯಾಗಿದೆ. ಹೀಗಿದ್ದರೂ ಸೋಲಾಪುರ ಬಳಿಯ ದರ್ಗಾ ಜೈಲ್ ರಸ್ತೆಯಲ್ಲಿ ದಿ. ರಾಜಾರಾಮ ದೇವಗಿರಿ ರುದ್ರಭೂಮಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.‌ ಇಲ್ಲಿ ಅಂತ್ಯಕ್ರಿಯೆ ನಡೆಸುವ ವ್ಯಕ್ತಿ ಶಂಕರ ಎಂಬಾತ ಸ್ಮಶಾನದಲ್ಲಿಯೇ ಚಿಕ್ಕ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ.

ಅಂತ್ಯಸಂಸ್ಕಾರ ನಡೆಸುವವರು ಸ್ಮಶಾನದಲ್ಲಿಯೇ ವಾಸ:

ಗದಗ ಮೂಲದ ಶಂಕರ ಕೆಲಸ ಹುಡುಕಿಕೊಂಡು ವಿಜಯಪುರಕ್ಕೆ ಬಂದಿದ್ದರು. ಆ ವೇಳೆ ನಗರದ ಗಣ್ಯ ವ್ಯಾಪಾರಿಗಳಾದ ದೇವಗಿರಿ ಕುಟುಂಬ ಹಾಗೂ ಕೆಲ ಇತರೆ ಸಮಾಜದ ಮುಖಂಡರು ನಡೆಸುತ್ತಿದ್ದ ವಿಜಯಪುರ ಶಹರ ಹಿಂದೂ ದಹನ ಸಂಸ್ಕಾರ ಭೂಮಿ ಅಭಿವೃದ್ಧಿ ಸಮಿತಿಯ ಸ್ಮಶಾನದಲ್ಲಿ ಉದ್ಯೋಗ ಕೊಟ್ಟು ಅಲ್ಲಿಯೇ ಮನೆ ಕಟ್ಟಿಸಿಕೊಟ್ಟಿದ್ದಾರೆ. ಸದ್ಯ ಶಂಕರ ದಂಪತಿ ಸ್ಮಶಾನಕ್ಕೆ ಬರುವ ಸೊಂಕಿತ ಮೃತರ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ.

ಜಿಲ್ಲಾಡಳಿತದಿಂದ ಯಾವುದೇ ಸೌಲಭ್ಯವಿಲ್ಲ:

ಶವ ಸಂಸ್ಕಾರ ನಡೆಸುವ ಶಂಕರ ಮಾತನಾಡಿ, ಶವ ಸಂಸ್ಕಾರ ಮಾಡಲು ಜಿಲ್ಲಾಡಳಿತ ಯಾವುದೇ ಪಿ.ಪಿ.ಇ. ಕಿಟ್ ಆಗಲಿ ಇನ್ನಿತರೆ ಸೌಲಭ್ಯವಾಗಲಿ ನೀಡಿಲ್ಲ. ಎಲ್ಲವನ್ನೂ ಟ್ರಸ್ಟ್​​ನವರೇ‌ ನೀಡುತ್ತಿದ್ದಾರೆ. ದೊರೆಯುವ 6 ಸಾವಿರ ಸಂಬಳ, ಮೃತರ ಕುಟುಂಬಸ್ಥರು ನೀಡುವ ಅಲ್ಪ ಸ್ವಲ್ಪ ಹಣದಲ್ಲಿ ಜೀವನ‌ ಸಾಗಿಸುತ್ತಿದ್ದೇನೆ ಎಂದು ತಿಳಿಸಿದರು.

ಸ್ಮಶಾನ‌ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ ದೇವಗಿರಿ ಪ್ರತಿಕ್ರಿಯಿಸಿ, ಶವ ಸಂಸ್ಕಾರ ನಡೆಸುವ ಶಂಕರ ಅವರಿಗೆ ಕೇವಲ 6,000 ರೂ. ಸಂಬಳವಿದೆ. ನಾನು ವೈಯಕ್ತಿಕವಾಗಿ 3,000 ನೀಡುತ್ತಿದ್ದೇನೆ. ಅಗತ್ಯವಾಗಿ ಬೇಕಾದ ವೈದ್ಯಕೀಯ ಸೇವೆ ಮತ್ತು ಸುರಕ್ಷತಾ ಸೌಲಭ್ಯವನ್ನು ನಮ್ಮ ಸಮಿತಿ ವತಿಯಿಂದಲೇ ನೀಡುತ್ತಿದ್ದೇವೆ. ನಮಗಾದರೂ ಯಾವುದೇ ಸೌಲಭ್ಯವನ್ನು ಸರ್ಕಾರ ಕೊಟ್ಟಿಲ್ಲ. ಸಮಾಜ ಸೇವೆ ಎಂದು ಭಾವಿಸಿ ಈ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕೋವಿಡ್ ನಂತರ ಕಠಿಣ ಪರಿಸ್ಥಿತಿಯಲ್ಲಿ ಶವ ಸಂಸ್ಕಾರ ನಡೆಸುವ ಕುಟುಂಬ ಸಹ ಕೊರೊನಾ ವಾರಿಯರ್ಸ್ ಆಗಿರುತ್ತಾರೆ. ಸೋಂಕಿತರು ಮೃತ ಪಟ್ಟರೆ ಶವದ ಬಳಿ ಹೋಗಲು, ಅಂತ್ಯಕ್ರಿಯೆ ವಿಧಿವಿಧಾನ ನಡೆಸಲು ಕುಟುಂಬದ ಸದಸ್ಯರೇ ಹಿಂಜರಿಯುವ ಈ ಕಾಲದಲ್ಲಿ ಇವರು ತಮ್ಮ ಜೀವದ ಹಂಗು ತೊರೆದು ಅಂತ್ಯಕ್ರಿಯೆ ನೆರವೇರಿಸಿಕೊಡುತ್ತಾರೆ. ಹಾಗಾಗಿ ಜಿಲ್ಲಾಡಳಿತ ಆತನ‌ ಕುಟುಂಬದ ರಕ್ಷಣೆಗೆ, ಜೀವನ‌ ಸಾಗಿಸುವಷ್ಟು ಸಂಬಳ ಮತ್ತು ಇತರೆ ಸೌಲಭ್ಯ ನೀಡಬೇಕು ಎನ್ನುವುದು ಸ್ಮಶಾನ‌ ಅಭಿವೃದ್ಧಿ ಸಮಿತಿಯ ಬೇಡಿಕೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಅವರಿಗೆ ಮನವಿ ಸಹ ಸಲ್ಲಿಸಿದೆ.

ಇದನ್ನೂ ಓದಿ:ಸಾವಿನ ಸಂಖ್ಯೆ ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ: ಬಿ.ಸಿ.ಪಾಟೀಲ್

ABOUT THE AUTHOR

...view details