ವಿಜಯಪುರ: ಕಳೆದ ವರ್ಷ ಕೋವಿಡ್ ಮಹಾಮಾರಿಯು ಇಡೀ ಪ್ರಪಂಚವನ್ನೇ ಆಕ್ರಮಿಸಿ, ಎಲ್ಲರನ್ನು ಸಂಕಷ್ಟಕ್ಕೀಡುಮಾಡಿತ್ತು. ಕೋವಿಡ್ ಹೊಡೆತ ಬೀಳದ ಕ್ಷೇತ್ರಗಳೇ ಇಲ್ಲ. ಹೌದು, ಪ್ರತೀ ಪ್ರಮುಖ ಕ್ಷೇತ್ರಗಳ ಮೇಲೆ ಕೋವಿಡ್ ತನ್ನ ದುಷ್ಪರಿಣಾಮ ಬೀರಿದ್ದು, ಇದರಿಂದ ಶಿಕ್ಷಣ ಕ್ಷೇತ್ರ ಸಹ ಹೊರತಾಗಿಲ್ಲ. ಅದೆಷ್ಟೋ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯಬೇಕಾದ ಹಂತದಲ್ಲಿ ಕೆಲಸಕ್ಕೆ ಹೋದ ನಿದರ್ಶನಗಳು ಹಲವು. ಈ ಕುರಿತು ವಿಜಯಪುರ ಜಿಲ್ಲೆಯ ಪರಿಸ್ಥಿತಿ ಏನು? ಇಲ್ಲಿದೆ ಸಮಗ್ರ ಮಾಹಿತಿ..
ಮಹಾಮಾರಿ ಕೊರೊನಾ ದೇಶದಲ್ಲಿ ಹತ್ತು ಹಲವು ಬದಲಾವಣೆಗೆ ನಾಂದಿ ಹಾಡಿತ್ತು. ಸಮಸ್ಯೆಗಳ ಸಾಗರವೇ ಹರಿದು ಬಂತು. ಅದರಲ್ಲಿ ಮುಖ್ಯವಾಗಿ ಬಡ, ಕೂಲಿ ಕಾರ್ಮಿಕ ವರ್ಗ ಉದ್ಯೋಗವಿಲ್ಲದೆ ಹಲವು ಸಮಸ್ಯೆ ಎದುರಿಸಬೇಕಾಯಿತು. ಇದರ ನೇರ ಪರಿಣಾಮ ಮಕ್ಕಳ ಶಿಕ್ಷಣದ ಮೇಲೆ ಬಿದ್ದಿರುವುದು ಮಾತ್ರ ವಿಪರ್ಯಾಸ. ತುತ್ತು ಅನ್ನಕ್ಕೂ ಪರದಾಡಿದ ಕುಟುಂಬಗಲು ತಮ್ಮ ಮಕ್ಕಳನ್ನೂ ಕೂಡ ಕೆಲಸಕ್ಕೆ ಕಳುಹಿಸಿ, ಅವರ ಭವಿಷ್ಯಕ್ಕೆ ಇತಿಶ್ರೀ ಹಾಡಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಕೋವಿಡ್-ಲಾಕ್ಡೌನ್ ಎಫೆಕ್ಟ್ ವಿಜಯಪುರದ ಉಜ್ವಲ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ಯುಆರ್ಡಿಎಸ್) ನಡೆಸಿದ ಸಮೀಕ್ಷೆಯಂತೆ ಬಡ ಕಾರ್ಮಿಕ ವರ್ಗದ ಮಕ್ಕಳು ಸದ್ಯ ಶಾಲೆ ತೊರೆದು ಬಾಲ ಕಾರ್ಮಿಕರಾಗಿ ಹೋಟೆಲ್, ಗ್ಯಾರೇಜ್, ತರಕಾರಿ ಮಾರಾಟ ಸೇರಿದಂತೆ ಹತ್ತು ಹಲವು ಅಸಂಘಟಿತ ವಲಯಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಪೋಷಕರ ಹೆಗಲಿಗೆ ಹೆಗಲು ಕೊಟ್ಟು ಜೀವನ ನಿರ್ವಹಣೆಗೆ ನೆರವಾಗಿದ್ದಾರೆ.
ಕೋವಿಡ್ ಬರುವ ಮುನ್ನ ಸರ್ಕಾರಿ ಶಾಲೆಗೆ ಬಡ ಮಕ್ಕಳು ವಿದ್ಯಾಭ್ಯಾಸದ ಜೊತೆ ಮಧ್ಯಾಹ್ನದ ಬಿಸಿಯೂಟಕ್ಕೆ ಹೋಗುತ್ತಿದ್ದರು. ದಿನಕ್ಕೆ ಒಂದು ಹೊತ್ತಾದರೂ ಹೊಟ್ಟೆ ತುಂಬ ಊಟ ಮಾಡುತ್ತಿದ್ದರು. ಆದರೆ ಕೋವಿಡ್ ನಂತರ ಶಾಲೆ ಬಂದ್ ಆದ ಹಿನ್ನೆಲೆ, ಮಧ್ಯಾಹ್ನದ ಬಿಸಿಯೂಟ ಸಹ ಸಿಗದೇ ಬಾಲಕಾರ್ಮಿಕರಾಗಿ ದುಡಿಯಲು ಹೋಗುತ್ತಿದ್ದಾರೆ. ಸದ್ಯ ಶಾಲೆ ಆರಂಭಗೊಂಡಿದ್ದರೂ ಸಹ ದುಡಿಯಲು ಹೋಗುತ್ತಿರುವ ಮಕ್ಕಳು ವಾಪಸ್ ಶಾಲೆಗೆ ಬರುವ ಆಸಕ್ತಿ ಕಳೆದುಕೊಂಡಿದ್ದಾರೆಂಬ ಮಾಹಿತಿ ದೊರೆತಿದೆ.
ಆದರೆ ಸರ್ಕಾರದ ಪ್ರಕಾರ, ಕೋವಿಡ್ ಸಂದರ್ಭದಲ್ಲಿಯೂ ಬಡ ಪಾಲಕರ ಮನೆಗಳಿಗೆ ಆಹಾರ ಧಾನ್ಯ ವಿತರಿಸಲಾಗಿದೆ. ಮೊದಲ ಹಂತದಲ್ಲಿ 43 ದಿನಕ್ಕಾಗುವಷ್ಟು ಹಾಗೂ ಎರಡನೇ ಹಂತದಲ್ಲಿ 51 ದಿನಕ್ಕಾಗುವಷ್ಟು ಆಹಾರ ಧಾನ್ಯ ವಿತರಿಸಲಾಗಿದೆ. ಅಷ್ಟಾಗಿಯೂ ಪಾಲಕರು ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಗೆ ತಳ್ಳುತ್ತಿದ್ದಾರೆ. ಈಗ ಶಾಲೆ ಆರಂಭವಾಗಿದ್ದು, ಎಂದಿನಂತೆ ಪೂರ್ಣ ಪ್ರಮಾಣದ ತರಗತಿಗಳು ನಡೆಯುತ್ತಿವೆ. ಆದರೂ ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಒತ್ತಾಯ ಪೂರ್ವಕವಾಗಿ ಮಕ್ಕಳಿಗೆ ಶಾಲೆಗೆ ಬನ್ನಿ ಎಂದು ಹೇಳುವ ಹಾಗಿಲ್ಲ. ಹಾಗಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯದತ್ತ ಚಿಂತನೆ ಮಾಡಿ ಶಾಲೆಗೆ ಕಳುಹಿಸುವಂತೆ ಸರ್ಕಾರ ಮನವಿ ಮಾಡುತ್ತಿದೆ.
ಈ ಸುದ್ದಿಯನ್ನೂ ಓದಿ:ಕೈಯಲ್ಲಿ ಸ್ಮಾರ್ಟ್ಫೋನ್, ಮನೆಯಲ್ಲಿ ಟಿವಿ ಇಲ್ಲ ; ವಲಸೆ ಕಾರ್ಮಿಕರ ಮಕ್ಕಳ ಭವಿಷ್ಯ ಅತಂತ್ರ!!
ಇದೆಲ್ಲದರ ನಡುವೆ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಮತ್ತೆ ಶಾಲೆ ಬಂದ್ ಆದರೆ ಬಡ ಮಕ್ಕಳ ಭವಿಷ್ಯ ಅಂಧಕಾರವಾಗಲಿದೆ. ಆನ್ಲೈನ್ ಶಿಕ್ಷಣ ಕಲಿಯುವಷ್ಟು ಶಕ್ತಿ ಬಡ ಮಕ್ಕಳಿಗೆ ಇರುವುದಿಲ್ಲ, ಅದಕ್ಕೆ ಸರ್ಕಾರವೇ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಇಲ್ಲವಾದರೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಬಾಲ ಕಾರ್ಮಿಕ ಪದ್ಧತಿಯಂತಹ ಪಾಪದ ಕೂಪದಲ್ಲಿ ಬೆಂದು ಹೋಗಬಹುದು. ಹಾಗಾಗಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.