ವಿಜಯಪುರ :ಹೈಡ್ರಾಕ್ಷಿಕ್ಲೋರೊಕ್ವೀನ್(ಹೆಚ್‌ಸಿಕ್ಯೂ) ಮಾತ್ರೆಗಳನ್ನು ಕೋವಿಡ್-19 ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಪೂರೈಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ವೈದ್ಯಕೀಯ ಸಲಹೆ ಆಧಾರದ ಮೇಲೆ ಈ ಮಾತ್ರೆ ನೀಡಲಾಗುತ್ತಿದೆ. ಅದರಂತೆ ವೈದ್ಯಕೀಯ ತುರ್ತು ಉಪಚಾರದ ಮೇಲೆ ಬೇರೆ ಜಿಲ್ಲೆಗೆ ತೆರಳಲು ನಿಗದಿತ ಪಾಸ್ ಮತ್ತು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕಡ್ಡಾಯಗೊಳಿಸಿದೆ. ಬೇರೆ ಜಿಲ್ಲೆಗಳಿಂದ ಬರುವವರು ಕೂಡಾ ಆಯಾ ಸಕ್ಷಮ ಪ್ರಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಗರ್ಭಿಣಿ ಮಹಿಳೆಯರಿಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರ ಮತ್ತು ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ತಲಾ ಒಂದರಂತೆ ‘’ನಗು-ಮಗು’ ವಾಹನದ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸಬೇಕು, ಇದಕ್ಕೆ ಬೇಕಾದ ಅನುದಾನ ಮತ್ತು ಇಂಧನ ವೆಚ್ಚದ ಸೌಲಭ್ಯವನ್ನು ಕಲ್ಪಿಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಾದ್ಯಂತ ನ್ಯಾಯಬೆಲೆ ಅಂಗಡಿಗಳ ಮೂಲಕ ಶೇ.100ರಷ್ಟು ಪಡಿತರ ಧಾನ್ಯ ತಕ್ಷಣ ವಿತರಣೆಯಾಗಬೇಕು. ವಿಶೇಷವಾಗಿ ವಿಜಯಪುರ ನಗರ ಮತ್ತು ಅತಿ ಕಡಿಮೆ ಸಾಧನೆ ತೋರಿರುವ ನ್ಯಾಯಬೆಲೆ ಅಂಗಡಿಗಳ ಬಗ್ಗೆ ಪರಿಶೀಲಿಸಿ ಆದ್ಯತೆಯ ಮೇಲೆ ಸಾಮಾಜಿಕ ಅಂತರ ನಿಯಮ ಪಾಲನೆಯೊಂದಿಗೆ ವಿತರಣೆಯಾಗುವಂತೆ ನೋಡಿಕೊಳ್ಳಬೇಕು.
ಇಂದು ಮಧ್ಯಾಹ 451 ಜನ ವಿದೇಶ ಮತ್ತು ಇತರ ಕಡೆಯಿಂದ ಬಂದ ಬಗ್ಗೆ ವರದಿಯಾಗಿದೆ. 258 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 138 ಜನರು 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 55 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 32 ಜನರು ಸರ್ಕಾರಿ ಐಸೋಲೇಷನ್‍ದಲ್ಲಿದ್ದು, ಈವರೆಗೆ ಕಳುಹಿಸಲಾದ 92 ಜನರ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿಯಲ್ಲಿ 65 ನೆಗೆಟಿವ್ ಬಂದಿವೆ. ಇನ್ನೂ 27 ಜನರ ವರದಿ ಬರಬೇಕಾಗಿದೆ ಎಂದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು, ಜಿಲ್ಲಾದ್ಯಂತ ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಮಲೇರಿಯಾ ಸರ್ವೇಕ್ಷಣಾಧಿಕಾರಿಗಳು ಸರ್ಕಾರದ ನಿರ್ದೇಶನದ ಅನ್ವಯ ಯಾವುದೇ ದೂರುಗಳಿಗೆ ಅವಕಾಶ ನೀಡದೆ, ದೈನಂದಿನ ಕೆಲಸಗಳನ್ನು ನಡೆಸುವಂತೆ ತಿಳಿಸಿದರು. ಸರ್ವೇಕ್ಷಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.