ವಿಜಯಪುರ: ಇಂದು ಜಿಲ್ಲೆಯಲ್ಲಿ ಬಂದಿರುವ ಎರಡು ಪಾಸಿಟಿವ್ ಫಲಿತಾಂಶ ಸಾಕಷ್ಟು ಕೂತುಹಲ ಕೆರಳಿಸಿದ್ದು, ಇದರಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ 429 ನೇ ಸಂಖ್ಯೆಯ 25 ವರ್ಷದ ಯುವತಿಗೆ ಸೋಂಕು ತಗುಲಿದೆ. ಆಂಧ್ರಪ್ರದೇಶ ಮೂಲದ ಈ ಯುವತಿಗೆ ಯಾವ ರೀತಿ ಸೋಂಕು ತಗುಲಿದೆ ಎನ್ನುವುದರ ಬಗ್ಗೆ ತಿಳಿಯಲು ಮೂವರು ಹಿರಿಯ ವೈದ್ಯರ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿಯ ಕುರಿತು ಕಳೆದ ಒಂದು ತಿಂಗಳ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಆಕೆಗೆ ಜ್ವರ, ಇನ್ನಿತರ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸ್ವಯಂ ಆಗಿ ಕೊರೊನಾ ವೈರಸ್ ಪರೀಕ್ಷೆಗೆ ಬಂದಿದ್ದಳು. ಆಕೆ ಹಾಗೂ ಆಕೆಯ ಸಂಪರ್ಕದಲ್ಲಿದ್ದ 25 ಜನರ ಗಂಟಲು ದ್ರವದ ಮಾದರಿ ಪಡೆದುಕೊಂಡು ಪರೀಕ್ಷೆಗೆ ಒಳಪಡಿಸಿದ್ದು, ಈ ಯುವತಿಯೊಬ್ಬಳದ್ದು ಮಾತ್ರ ಪಾಸಿಟಿವ್ ಬಂದಿದೆ. ಉಳಿದವರದ್ದು ನೆಗೆಟಿವ್ ಬಂದಿದೆ ಎಂದರು.