ವಿಜಯಪುರ:ಉತ್ತರ ಕರ್ನಾಟಕದ ಜೀವನದಿ ಆಲಮಟ್ಟಿ(ಲಾಲ್ ಬಹದ್ದೂರ ಶಾಸ್ತ್ರಿ) ಜಲಾಶಯ ಭರ್ತಿಗೆ ದಿನಗಣನೆ ಶುರುವಾಗಿದೆ. ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ತಟದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಒಳಹರಿವು ಪ್ರತಿ 24 ಗಂಟೆಗೊಮ್ಮೆ ಹೆಚ್ಚುತ್ತಿದೆ. ಇದರಿಂದ ಹೊರ ಹರಿವು ಸಹ ಹೆಚ್ಚಾಗಿದ್ದು, ನಿನ್ನೆ ಮತ್ತು ಇಂದು 1 ಲಕ್ಷ ಕ್ಯೂಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ.
ನಾಳೆಯೊಳಗೆ ಭರ್ತಿಯಾಗುವ ಸಾಧ್ಯತೆ: ಜಲಾಶಯದ ಒಳಹರಿವು ಹೆಚ್ಚಾದ ಪರಿಣಾಮ 519.60 ಮೀಟರ್ ಸಂಗ್ರಹದ ಜಲಾಶಯದಲ್ಲಿ ಇಂದು ಬೆಳಗ್ಗೆ 519.37ಮೀಟರ್ ನಷ್ಟು ನೀರು ಸಂಗ್ರಹವಾಗಿದೆ. ಇದೇ ಪ್ರಮಾಣದಲ್ಲಿ ಆಲಮಟ್ಟಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾದರೆ ನಾಳೆಯೊಳಗಾಗಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಗಳಿವೆ.
ಸದ್ಯ ಜಲಾಶಯದ 26 ಕ್ರಸ್ಟ್ ಗೇಟ್ಗಳ ಪೈಕಿ 24 ಕ್ರಸ್ಟ್ ಗೇಟ್ಗಳನ್ನು ತೆರೆದು 55 ಸಾವಿರ ಕ್ಯೂಸೆಕ್ ಹಾಗೂ ಕೆಪಿಸಿಎಲ್ ಮೂಲಕ 45 ಸಾವಿರ ಕ್ಯೂಸೆಕ್ ಸೇರಿ ಒಟ್ಟು 1 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇಂದು ನೀರಿನ ಒಳಹರಿವು 79.492 ಕ್ಯೂಸೆಕ್ ಹಾಗೂ ಹೊರ ಹರಿವು 1 ಲಕ್ಷ ಕ್ಯೂಸೆಕ್ ಇದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 123.08 ಟಿಎಂಸಿ ಇದ್ದು, ಸದ್ಯ ಜಲಾಶಯದಲ್ಲಿ117.376 ಟಿಎಂಸಿ ನೀರು ಸಂಗ್ರಹವಿದೆ.