ವಿಜಯಪುರ: ರಾಜ್ಯದಲ್ಲಿಯೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ವಿಜಯಪುರ. ಈ ವರ್ಷ ಅತಿಯಾದ ಮಳೆ, ಹವಾಮಾನ ವೈಪರೀತ್ಯದಿಂದ ಶೇ. 90ರಷ್ಟು ದ್ರಾಕ್ಷಿ ಬೆಳೆ ವಿವಿಧ ರೋಗಕ್ಕೆ ತುತ್ತಾಗಿದೆ. ಉಳಿದ ದ್ರಾಕ್ಷಿ ಎಲೆ ಚಿಗುರಲಿ ಎಂದು ಕಟಿಂಗ್ ಮಾಡಬೇಕು ಎನ್ನುವ ವೇಳೆ ಪ್ರವಾಹ ಅದನ್ನು ಹಾಳು ಮಾಡಿದೆ. ಪ್ರತಿ ವರ್ಷ ವಿದೇಶಕ್ಕೆ ರಫ್ತು ಆಗುತ್ತಿದ್ದ ದ್ರಾಕ್ಷಿ ಈ ಬಾರಿ ಬೆಳೆಗಾರರಿಗೂ ಹುಳಿಯಾಗಿದೆ.
ಜಿಲ್ಲೆ ಬರದ ನಾಡು ಆಗಿದ್ದರೂ ಸಹ ತೋಟಗಾರಿಕೆ ಬೆಳೆಯಲ್ಲಿ ತನ್ನದೇ ವೈಶಿಷ್ಟ್ಯ ಕಾಪಾಡಿಕೊಂಡು ಬಂದಿದೆ. ಲಿಂಬೆ, ಸೀತಾಫಲ, ದಾಳಿಂಬೆ, ದ್ರಾಕ್ಷಿ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 14,500 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿತ್ತು. ಹಲವು ನೀರಾವರಿ ಯೋಜನೆ ಯಶಸ್ವಿಯಾದ ಕಾರಣ ದ್ರಾಕ್ಷಿ ಬೆಳೆಗಾರರಿಗೆ ಹುಮ್ಮಸ್ಸು ಮೂಡಿತ್ತು. ಆದರೆ ಕಟಿಂಗ್ ಮಾಡಿ ಎಲೆ ಸಂರಕ್ಷಿಸುವ ವೇಳೆ ವಿಪರೀತ ಮಂಜು ಕವಿದ ವಾತವರಣ, ಹವಾಮಾನ ವೈಪರೀತ್ಯ ಹಾಗೂ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ದ್ರಾಕ್ಷಿ ಎಲೆಗಳಿಗೆ ಹಳದಿ ರೋಗ, ಬಾಡು ರೋಗ ತಗುಲಿ ಚಿಗುರಬೇಕಾಗಿದ್ದ ಎಲೆ ಬಾಡಿ ಉದುರುತ್ತಿದೆ.