ವಿಜಯಪುರ:ಕೊರೊನಾದಿಂದಾಗಿ ಲಾಕ್ಡೌನ್ ಜಾರಿಯಾಗಿದ್ದು, ಸಾಕಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಬಿಸಿ ಕುಂಬಾರರಿಗೂ ತಟ್ಟಿದೆ.
ಕುಂಬಾರರ ಬದುಕನ್ನು ಬೀದಿಗೆ ತಂದ ಕಿಲ್ಲರ್ ಕೊರೊನಾ ದೇಶಾದ್ಯಂತ ಲಾಕ್ಡೌನ್ ಜಾರಿಯಾಗಿದ್ದು, ರೈತರು, ಕಾರ್ಮಿಕರು, ಹೋಟೆಲ್ ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಂತೆ ಸಣ್ಣ ಸಣ್ಣ ಉದ್ಯಮವನ್ನು ನಂಬಿಕೊಂಡು ಜೀವನ ನಡೆಸುವವರ ಬದುಕು ಸಹ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲೆಯಲ್ಲಿ ಕುಂಬಾರಿಕೆಯಿಂದ ಜೀವನ ಸಾಗಿಸುತ್ತಿರುವ ಕಾರ್ಮಿಕರ ಸ್ಥಿತಿ ಕೂಡ ಇದೇ ಆಗಿದ್ದು, ವ್ಯಾಪಾರ-ವಾಹಿವಾಟಿಲ್ಲದೆ ಲಕ್ಷಾಂತರ ರೂಪಾಯಿ ಹಣ ವ್ಯಯಿಸಿ ತಯಾರಿಸಿರುವ ಮಡಿಕೆಗಳು ಮೂಲೆ ಸೇರಿವೆ.
ಹುನಗುಂದ, ಗುಳೇದಗುಡ್ಡ, ಅಮೀನಗಡ್ ಸೇರಿದಂತೆ ಅನೇಕ ಗ್ರಾಮಗಳಲ್ಲಿರುವ ಹಲವು ಕುಟುಂಬಗಳು ಕುಂಬಾರಿಕೆ ಕೆಲಸವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಮಡಿಕೆ, ಗಡಿಗೆ, ಹಣತೆ, ಹರಿವೆ, ತತ್ರಾಣಿ ಸೇರಿದಂತೆ ವಿವಿಧ ಮಣ್ಣಿನ ವಸ್ತುಗಳನ್ನು ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಿಂದ ತಂದು ಊರೂರು ಸುತ್ತಾಡಿ ಮಾರಾಟ ಮಾಡುತ್ತಿದ್ದ ಕುಂಬಾರರು ಈಗ ದಿಕ್ಕು ತೋಚದಂತಾಗಿದ್ದಾರೆ.
ಆದರೆ, ಕೊರೊನಾ ಪರಿಣಾಮದಿಂದ ಕುಂಬಾರರ ಬದುಕು ದುಸ್ತರವಾಗಿದೆ. ಒಂದು ಮಡಿಕೆಗೆ 300 ರೂ. ಗಳವರಿಗೆ ಮಾರಾಟವಾಗುತ್ತಿತ್ತು. ಇದೀಗ ಇದು ಕೂಡ ನಿಂತಿದೆ. ಹೀಗಾಗಿ ಜೀವನ ಸಾಗಿಸುವುದು ಕಷ್ಟಕರವಾಗಿದ್ದು, ನಮಗೆ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.