ವಿಜಯಪುರ:ಉತ್ತರ ಕರ್ನಾಟಕದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿರುವ ವಿಜಯಪುರ ಜಿಲ್ಲೆಯಲ್ಲಿ ಆಲಮಟ್ಟಿಯ ಕೃಷ್ಣಾ ನದಿ ಬಳಿ ಬೃಹತ್ ಪ್ರಮಾಣದಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಲಾಗಿದೆ. ಇಲ್ಲಿ ಅನೇಕ ಪ್ರವಾಸಿಗರು ಪ್ರತಿನಿತ್ಯ ಭೇಟಿ ನೀಡುತ್ತಿದ್ದರು. ಆದರೆ ಕೋವಿಡ್ ಪರಿಣಾಮ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಉದ್ಯಾನವನಗಳನ್ನು ಬಂದ್ ಮಾಡಲಾಗಿದೆ.
ವಿಜಯಪುರದಲ್ಲಿ ಲಾಕ್ಡೌನ್ ವೇಳೆಯೂ ಥೀಮ್ ಪಾರ್ಕ್ಗಳ ನಿರ್ವಹಣೆಗೆ ಆದ್ಯತೆ
ಲಾಕ್ಡೌನ್ನಿಂದ ಅನೇಕ ಥೀಮ್ ಪಾರ್ಕ್ಗಳು ಹಾಳಾಗಿವೆ. ಆದರೆ ವಿಜಯಪುರದಲ್ಲಿ ಮಾತ್ರ ಉದ್ಯಾನವನಗಳ ಪಾಲನೆಗೆ ಆದ್ಯತೆ ನೀಡಲಾಗಿದೆ.
ಆಲಮಟ್ಟಿಯ ಉದ್ಯಾನವನ್ನು ಕೃಷ್ಣಾ ಜಲ ಭಾಗ್ಯ ನಿಗಮ (ಕೆಬಿಜೆಎನ್ಎಲ್) ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ನಿರ್ವಹಣೆ ಮಾಡುತ್ತಿವೆ. ಉದ್ಯಾನವನ ನಿರ್ವಹಣೆಗಾಗಿ 250ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಇವರೆಲ್ಲಾ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಯಾರೊಬ್ಬ ಉದ್ಯೋಗಿಯನ್ನೂ ಕೆಲಸದಿಂದ ತೆಗೆದಿಲ್ಲ. ಸಂಬಳವನ್ನೂ ಸಹ ಸರಿಯಾಗಿ ನೀಡಲಾಗುತ್ತಿದೆ. ಉದ್ಯಾನವನದ ಒಳಗಿನ ಸ್ವಚ್ಛತೆ ಬಿಟ್ಟು ಉಳಿದ ನಿರ್ವಹಣೆಯನ್ನು ಕೆಲಸಗಾರರು ಮಾಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳು ಉದ್ಯಾನವನದ ಆದಾಯ ಕನಿಷ್ಟ 50 ಲಕ್ಷ ರೂ ನಷ್ಟ ಅನುಭವಿಸಿದೆ. ಇದೇ ರೀತಿ ಉದ್ಯಾನವನ ಬಂದ್ ಆದರೆ ಮತ್ತಷ್ಟು ನಷ್ಟ ವನ್ನು ಕೆಬಿಜೆಎನ್ಎಲ್ ಅನುಭವಿಸಬೇಕಾಗುತ್ತದೆ.
ಮಹಿಳಾ ವಿವಿ ಥೀಮ್ ಪಾರ್ಕ್ :ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಎನ್ನುವ ಖ್ಯಾತಿ ಹೊಂದಿರುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಮಹಿಳಾ ಸಾಧಕಿಯರ ಪ್ರತಿಮೆ ಸ್ಥಾಪಿಸಿ ವಿವಿಗೆ ಬರುವ ವಿದ್ಯಾರ್ಥಿನಿಯರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಕೊರೊನಾದಿಂದ ಕಳೆದ ನಾಲ್ಕು ತಿಂಗಳಿಂದ ವಿಶ್ವವಿದ್ಯಾಲಯ ಬಂದ್ ಇದೆ. ಆದರೂ ಥೀಮ್ ಪಾರ್ಕ್ ನಿರ್ವಹಣೆಗೆ ಯಾವುದೇ ಕೊರತೆ ಇಲ್ಲ. ಥೀಮ್ ಪಾರ್ಕ್ ನಿರ್ವಹಣೆಗೆ ಮಹಿಳಾ ವಿವಿಯಲ್ಲಿ ಪ್ರತ್ಯೇಕ ಉದ್ಯೋಗಿಗಳಿದ್ದಾರೆ.