ಮುದ್ದೇಬಿಹಾಳ :ಕೊರೊನಾ ವೈರಸ್ ಹಾವಳಿ ಹಾಗೂ ಮಾರುಕಟ್ಟೆಯಲ್ಲಿ ಬಾಯಿಗೆ ಬಂದಷ್ಟು ಬೆಲೆ ನಿಗದಿಯಿಂದ ಈರುಳ್ಳಿ ಬೆಳಗಾರರು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿಯೇ ಅತೀ ಹೆಚ್ಚು ಈರುಳ್ಳಿ ಬೆಳೆದಿರುವ ರೂಢಗಿಯರೈತರ ಪಾಡು ಶೋಚನೀಯವಾಗಿದೆ.
ರೂಢಗಿಯಲ್ಲಿ ಹೆಚ್ಚಿನ ಭೂ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಾರರು ಇದ್ದು, ಇಲ್ಲಿ ಪಪ್ಪಾಯಿ, ಈರುಳ್ಳಿ, ಕಬ್ಬು, ದ್ರಾಕ್ಷಿ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅದರಲ್ಲಿ ಶೇ.80ರಷ್ಟು ರೈತರು ಈರುಳ್ಳಿ ಬೆಳೆಯುತ್ತಿದ್ದಾರೆ. ಅಂದಾಜು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಈ ಸಲ 100ಕ್ಕೂ ಹೆಚ್ಚು ಜನರು ಈರುಳ್ಳಿ ಬೆಳೆದಿದ್ದಾರೆ.
ಜೂನ್ 29ರಂದು ಢವಳಗಿ ಹೋಬಳಿ ವ್ಯಾಪ್ತಿಯಲ್ಲಿ 131 ಮಿ.ಮೀ ಮಳೆ ಸುರಿದಿದೆ. ಹಲವಾರು ಜಮೀನುಗಳು ಜಲಾವೃತಗೊಂಡಿವೆ. ಈರುಳ್ಳಿ ಸಂಗ್ರಹಗಾರಗಳಲ್ಲೂ ನೀರು ಹೋಗಿ ಬೆಳೆ ಕೊಳೆಯುತ್ತಿದೆ. ಆದರೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ, ಕೂತಲ್ಲಿಯೇ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಈ ಕುರಿತು ಮಾಹಿತಿಗಾಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಯತ್ನಿಸಿದ್ರೂ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.