ವಿಜಯಪುರ:ಕಲ್ಲಂಗಡಿ ತಿಂದರೆ ಮಹಾಮಾರಿ ಕೊರೊನಾ ವೈರಸ್ ಬರುತ್ತದೆ ಎಂದು ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಕಲ್ಲಂಗಡಿ ಬೆಳೆದ ರೈತ ತನ್ನ ಬೆಳೆ ನಾಶ ಮಾಡುತ್ತಿದ್ದಾನೆ. ಇಂತಹ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರಿಗೆ ಕಿವಿಮಾತು ಹೇಳಿದರು.
ಕಲ್ಲಂಗಡಿ ತಿಂದರೆ ಕೊರೊನಾ ಬರಲ್ಲ, ಅದೆಲ್ಲ ಸುಳ್ಳು ಸುದ್ದಿ: ಬಿ.ಸಿ.ಪಾಟೀಲ್ ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಮೂಲದ ಪ್ರಕಾರ ಕಲ್ಲಂಗಡಿ ಹಾಗೂ ಸೌತೆಕಾಯಿ ಹೆಚ್ಚಾಗಿ ಸೇವಿಸಿದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಕೊರೊನಾ ಅಲ್ಲ ಯಾವ ಮಾರಕ ರೋಗಗಳೂ ಬರುವುದಿಲ್ಲ. ನಿಶ್ಚಿತವಾಗಿ ಕಲ್ಲಂಗಡಿ ಮಾರಾಟ ಮಾಡಿ ಎಂದು ರೈತರಿಗೆ ಸಲಹೆ ನೀಡಿದ ಅವರು, ಇದೇ ವೇಳೆ ಸಾರ್ವಜನಿಕರು ಊಹಾಪೋಹದ ಸುದ್ದಿಗಳತ್ತ ಗಮನ ಹರಿಸಬಾರದು ಎಂದು ಮನವಿ ಮಾಡಿದರು.
ಇದೇ ರೀತಿ ಕೋಳಿ ಮಾಂಸ ತಿಂದರೂ ಸಹ ಕೊರೊನಾ ಬರುತ್ತದೆ ಎಂದು ಗಾಳಿಸುದ್ದಿ ಹರಡಿಸಲಾಗುತ್ತಿದೆ. ಇದರ ಪರಿಣಾಮ ಹಲವು ನಗರ, ಹಳ್ಳಿಗಳಲ್ಲಿ ಕೋಳಿಗಳನ್ನು ಜೀವಂತವಾಗಿ ಮಣ್ಣು ಮಾಡಲಾಗಿದೆ. ಕೆಲ ಕಿಡಿಗೇಡಿಗಳು ಮಾಡುವ ಕೆಲಸಕ್ಕೆ ಕೋಳಿ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಎಲ್ಲಾ ಇಲಾಖೆಗಳ ಸಭೆ ನಡೆಸಿದ್ದೇನೆ. ಸಭೆಯ ಮುಖ್ಯ ಉದ್ದೇಶ ರೈತರಿಗೆ ಅನುಕೂಲ ಕಲ್ಪಿಸುವುದಾಗಿದೆ ಎಂದರು. ವಿಜಯಪುರ ಜಿಲ್ಲೆಗೆ ಬೇಕಾದ ಎಲ್ಲಾ ಬೀಜ, ಗೊಬ್ಬರ ವ್ಯವಸ್ಥೆ ಆಗಿದೆ. ರೈತರಿಗೆ ಯಾರೇ ಅಧಿಕಾರಿಗಳು ತೊಂದರೆ ಮಾಡಿದ್ರೆ ಅಂಥವರ ಮೇಲೆ ಹಿಂದು ಮುಂದು ನೋಡದೆ ಕ್ರಮ ಕೈಗೊಳ್ಳಲಾಗುವುದು.
ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಳೆಯುವ ದ್ರಾಕ್ಷಿಗೆ ಸದ್ಯ ಉತ್ತಮ ಬೆಲೆ ಸಿಗುತ್ತಿಲ್ಲ. ಅಂತಹ ರೈತರು ವಿಜಯಪುರ-ಬಾಗಲಕೋಟೆಯಲ್ಲಿರುವ ಶೀತಲ ಗೃಹದಲ್ಲಿ ತಮ್ಮ ದ್ರಾಕ್ಷಿ ಸಂಗ್ರಹಿಸಿಟ್ಟು ಒಳ್ಳೆಯ ಬೆಲೆ ಬಂದಾಗ ಮಾರಾಟ ಮಾಡಿ ಎಂದು ಸಲಹೆ ನೀಡಿದರು.