ವಿಜಯಪುರ : ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ವರುಣ ಆರ್ಭಟದಿಂದ ಬಹುತೇಕ ಕೆರೆ, ನಾಲೆ, ನದಿಗಳು ಭರ್ತಿಯಾಗಿವೆ. ಮಳೆಯಿಂದಾಗಿ ಡೋಣಿ ನದಿ ಪ್ರವಾಹಕ್ಕೆ ನದಿ ಪಾತ್ರದ ಜನರು ತತ್ತರಿಸಿದ್ದಾರೆ. ಪ್ರವಾಹದಿಂದಾಗಿ ವಿಜಯಪುರ ಬೆಳಗಾವಿ ಹೆದ್ದಾರಿ ಬಂದ್ ಆಗುವ ಆತಂಕ ಎದುರಾಗಿದೆ. ಹೆದ್ದಾರಿಯನ್ನು ಡೋಣಿ ನದಿ ನೀರು ಸುತ್ತುವರೆದಿದೆ. ಸಾರವಾಡ ಗ್ರಾಮವೂ ಜಲಾವೃತವಾಗಿದ್ದು, ಜನ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.
ಮೊಸಳೆ ಪ್ರತ್ಯಕ್ಷ:ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಶ್ರೀ ಸರಸ್ವತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಬೆಳಗ್ಗೆ ಬಯಲು ಬಹಿರ್ದೆಸೆಗೆ ಎಂದು ಹೋಗಿದ್ದ ವಿದ್ಯಾರ್ಥಿ ಕಣ್ಣಿಗೆ ಮೊಸಳೆ ಕಂಡು ವಿದ್ಯಾರ್ಥಿ ಹಾಗೂ ಜನರಲ್ಲಿ ಆತಂಕ ಮೂಡಿಸಿದೆ. ಮೊಸಳೆ ಕಳೆದೊಂದು ವರ್ಷದಿಂದ ಕೆರೆಯಲ್ಲಿ ವಾಸ ಮಾಡುತ್ತಿದೆ ಎಂದು ಸಂಸ್ಥೆಯ ಸಂಚಾಲಕ ಮಲ್ಲಿಕಾರ್ಜುನ ಭಜಂತ್ರಿ ತಿಳಿಸಿದ್ದಾರೆ.
ಬೃಹತ ಗಾತ್ರದ ಮೊಸಳೆ ಇದ್ದು, ಜನ ಜಂಗುಳಿ ಕಡಿಮೆ ಆದ ನಂತರ ಕೆರೆಯಿಂದ ಹೊರಗೆ ಬರುತ್ತದೆ. ಈ ಕೆರೆಯ ಸುತ್ತಮುತ್ತ ಪ್ರದೇಶದಲ್ಲಿ ಮಹಿಳೆಯರು ಬಟ್ಟೆ ತೊಳೆಯಲು ಹೋಗುತ್ತಾರೆ. ವಿದ್ಯಾರ್ಥಿಗಳು, ಪುರುಷರು ಬಯಲು ಬಹಿರ್ದೆಸೆಗೆ ಹೋಗುತ್ತಿದ್ದು, ಯಾವ ಸಮಯದಲ್ಲಾದರೂ ಮೊಸಳೆ ದಾಳಿ ಮಾಡಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ.